ಅಶ್ಲೀಲ ಪದ ಬಳಕೆ: ಬಿಜೆಪಿ ನಾಯಕನ ವಿರುದ್ಧ ಮಹಿಳಾ ಸಂಸದರಿಂದ ದೂರು
ನವದೆಹಲಿ: ಹಗರಣಗಳು, ವಿವಾದಾತ್ಮಕ ಹೇಳಿಕೆ ಕುರಿತಂತೆ ಈಗಾಗಲೇ ಸಾಕಷ್ಟು ಸಮಸ್ಯೆಯಲ್ಲಿರುವ ಬಿಜೆಪಿಗೆ ಇದೀಗ ಮತ್ತೊಂದು ಸಮಸ್ಯೆ ಎದುರಾಗಿದ್ದು, ಅಶ್ಲೀಲ ನಿಂದನಾ ಭಾಷೆ ಬಳಕೆ ಮಾಡುತ್ತಿದ್ದಾರೆಂದು ಆರೋಪಿಸಿ ಬಿಜೆಪಿ ಸಂಸದ ರಮೇಶ್ ಬಿಧೂರಿ ವಿರುದ್ಧ ಮಹಿಳಾ ಸಂಸದೆಯರು ಸ್ಪೀಕರ್ ಸುಮಿತ್ರಾ ಮಹಾಜನ್ ಅವರಿಗೆ ಮಂಗಳವಾರ ದೂರು ನೀಡಿದ್ದಾರೆಂದು ಹೇಳಲಾಗುತ್ತಿದೆ.
ಈ ಕುರಿತಂತೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ವಿರೋಧ ಪಕ್ಷಗಳು 25 ಕಾಂಗ್ರೆಸ್ ಸಂಸದರನ್ನು ಅಮಾನತು ಮಾಡಿರುವುದರ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಬಿಜೆಪಿ ನಾಯಕ ರಮೇಶ್ ಬಿಧೂರಿ ಅವರು ನಮ್ಮನ್ನು ಉದ್ದೇಶಿಸಿ ಅಶ್ಲೀಲ ಭಾಷೆಯಲ್ಲಿ ನಿಂದನೆ ಮಾಡುತ್ತಿದ್ದರು ಎಂದು ಹೇಳಿರುವ ಮಹಿಳಾ ಸಂಸದರು ಸ್ಪೀಕರ್ ಬಳಿ ದೂರು ನೀಡಿದ್ದಾರೆ ಎಂದು ಹೇಳಿದೆ.
ಈ ಕುರಿತಂತೆ ಕಾಂಗ್ರೆಸ್ ಸಂಸದೆ ರಂಜೀತ್ ರಂಜನ್ ಅವರು ದೂರು ದಾಖಲಿಸಿದ್ದು, ದೂರಿನಲ್ಲಿ ರಮೇಶ್ ಬಿಧೂರಿ ಅವರು ಈ ವರೆಗೂ ಮೂರರಿಂದ ನಾಲ್ಕು ಬಾರಿ ಅಶ್ಲೀಲ ಭಾಷೆಯಲ್ಲಿ ನನ್ನನ್ನು ನಿಂದಿಸಿದ್ದಾರೆ. ಈ ಹಿಂದೆ ಕೇಂದ್ರ ಬಜೆಟ್ ಅಧಿವೇಶನದ ವೇಳೆ ಒಂಟಿಯಾಗಿ ಜೀವನ ನಡೆಸುತ್ತಿರುವ ಮಹಿಳೆಯರಿಗೆ ಸರ್ಕಾರ ಸೌಲಭ್ಯಗಳನ್ನು ಒದಗಿಸಬೇಕೆಂದು ಹೇಳಲಾಯಿತು. ನಾನು ಹೇಳಿಕೆ ನೀಡುತ್ತಿದ್ದಂತೆ ನನ್ನ ಕಡೆ ತಿರುಗಿ ನೋಡಿದ ರಮೇಶ್ ಬಿಧೂರಿ ಅವರು, ಮೊದಲು ನೀವು ನಿಮ್ಮ ಪತಿಗೆ ವಿಚ್ಛೇದನ ನೀಡಿ. ನಂತರ ನಿಮಗೆ ಸರ್ಕಾರ ಸೌಲಭ್ಯಗಳನ್ನು ನೀಡುತ್ತದೆ ಎಂದು ಹೇಳಿದ್ದರು. ಅದೇ ರೀತಿಯಲ್ಲಿ ಪ್ರತಿ ಬಾರಿಯೂ ರಮೇಶ್ ಬಿಧೂರಿ ಅವರು ಅಶ್ಲೀಲವಾಗಿ ನಿಂದನೆ ಮಾಡುತ್ತಲೇ ಬಂದರು. ಆದರೆ, ಇದನ್ನು ನಾನು ಗಂಭೀರವಾಗಿ ಪರಿಗಣಿಸಲೇ ಇಲ್ಲ. ಇದೀಗ ಮಹಿಳೆಯರ ಕುರಿತಂತೆ ಅಶ್ಲೀಲ ನಿಂದನಾ ಭಾಷೆಯನ್ನು ರಮೇಶ್ ಬಿಧೂರಿ ಬಳಸುತ್ತಿದ್ದು, ಇದನ್ನು ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ರಂಜಿತ್ ರಂಜನ್ ಅವರ ದೂರಿಗೆ ಈಗಾಗಲೇ ಎನ್ ಸಿಪಿ ಸಂಸದೆ ಸುಪ್ರೀಯ ಸುಲೆ, ಕಾಂಗ್ರೆಸ್ ಸಂಸದೆ ಸಿಲ್ಚರ್ ಸುಷ್ಮಿತಾ ದೇವ್, ಅರ್ಪಿತಾ ಘೋಷ್, ಪಿ,ಕೆ. ಶ್ರೀಮತಿ ಟೀಚರ್ ಸಾಥ್ ನೀಡಿದ್ದಾರೆ ಎಂದು ತಿಳಿದುಬಂದಿದೆ.
ತಮ್ಮ ವಿರುದ್ಧ ಮಹಿಳಾ ಸಂಸದೆಯರ ದೂರು ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ರಮೇಶ್ ಬಿಧೂರಿ ಅವರು, ಈ ಎಲ್ಲಾ ಆರೋಪಗಳನ್ನು ತಿರಸ್ಕರಿಸಿದ್ದು, ಆ ರೀತಿಯ ಭಾಷೆ ಬಳಸಲು ನನಗೂ ಹಾಗೂ ಸಂಸದೆಯರಿಗೂ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಸಂಸತ್ತಿನಲ್ಲಿ ಸುಖಾಸುಮ್ಮನೆ ಮುಖಂಡರು ಗದ್ದಲ ಮೂಡಿಸುತ್ತಿದ್ದರು. ಹೀಗಾಗಿ ಇದನ್ನು ನಾವು ವಿರೋಧಿಸಿದ್ದೇವೆಯೇ ಹೊರತು ಅಶ್ಲೀಲ ಭಾಷಾ ಪದಗಳನ್ನು ಬಳಸಿಯೇ ಇಲ್ಲ. ನಾವು ಆ ರೀತಿ ಬಳಸಿದ್ದೇ ಆದರೆ, ಈ ಕುರಿತಂತೆ ದಾಖಲೆಗಳನ್ನು ತೋರಿಸಲಿ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ