
ಶ್ರೀನಗರ/ನವದೆಹಲಿ: ಉಗ್ರ ಯಾಕೂಬ್ ಮೆಮನ್ ಅಂತ್ಯಕ್ರಿಯೆಗೆ ದೊಡ್ಡ ಪ್ರಮಾಣ ದಲ್ಲಿ ಜನ ಸೇರುವಂತೆ ನೋಡಿಕೊಂಡಿದ್ದೇ ಭೂಗತ ಪಾತಕಿ ದಾವೂದ್ ಇಬ್ರಾಹಿಂ! ಇಂತಹುದೊಂದು ಅಚ್ಚರಿಯ ಸಂಗತಿ ಈಗ ಬಹಿರಂಗವಾಗಿದೆ. ಯಾಕೂಬ್‍ಗೆ ಗೌರವ ಸಲ್ಲಿಸುವ ಸಲುವಾಗಿ ಹೆಚ್ಚಿನ ಸಂಖ್ಯೆ ಯಲ್ಲಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸುವಂತೆ ದಾವೂದ್ ಹಾಗೂ ಛೋಟಾ ಶಕೀಲ್ ತಮ್ಮ ಬೆಂಬಲಿಗರಿಗೆ ಸೂಚಿಸಿದ್ದರು. ಅದರಂತೆ, ಅಂದು 10 ಸಾವಿರಕ್ಕೂ ಅಧಿಕ ಮಂದಿ ಅಲ್ಲಿ ಸೇರಿದ್ದರು ಎಂದು ಟೈಮ್ಸ್ ಸ ಆಫ್ ಇಂಡಿಯಾ ವರದಿ ಮಾಡಿದೆ. ಭೂಗತ ಪಾತಕಿಗಳು ಈ ಬಗ್ಗೆ ಭಾರತದಲ್ಲಿದ್ದ ಆತ್ಮೀಯರಿಗೆ ಕರೆ ಮಾಡಿ ಸೂಚನೆ ನೀಡಿದ್ದರಿಂದ ಮುಂಬೈನ ಮರೈನ್ ಲೈನ್ಸ್ ಸ್ಮಶಾನಕ್ಕೆ ಸಾವಿರಾರು ಮಂದಿ ಧಾವಿಸಿದ್ದರು. ಅಂದು ಮಹೀಮ್ ಮತ್ತು ಮರೈನ್ ಲೈನ್ಸ್ ಸ್ಮಶಾನದಲ್ಲಿ 30 ಸಾವಿರ ಪೊಲೀಸರನ್ನು ನಿಂಯೋಜಿಸಲಾಗಿತ್ತು.
ಮೂರು ಸುದ್ದಿವಾಹಿನಿಗಳಿಗೆ ಕೇಂದ್ರ ನೋಟಿಸ್: ಕೇಂದ್ರದಲ್ಲಿ ಎನ್‍ಡಿಎ ಅಧಿಕಾರಕ್ಕೇರಿದ ಬಳಿಕ ಮೊದಲ ಬಾರಿಗೆ ಸರ್ಕಾರವು ಮೂರು ಸುದ್ದಿವಾಹಿನಿಗಳಿಗೆ ಷೋಕಾಸ್ ನೋಟಿಸ್ ಜಾರಿ ಮಾಡಿದೆ. ಯಾಕೂಬ್ ಮೆಮನ್‍ನನ್ನು ಗಲ್ಲಿಗೇರಿಸಿದ ದಿನ ಈ ವಾಹಿನಿಗಳು ನ್ಯಾಯಾಂಗ ವ್ಯವಸ್ಥೆ ಮತ್ತು ರಾಷ್ಟ್ರಪತಿಗೆ ಅಗೌರವ ತೋರುವ ವಿಚಾರಗಳನ್ನು ಪ್ರಸಾರ ಮಾಡಿದೆ ಎಂಬುದು ಸರ್ಕಾರದ ಆರೋಪವಾಗಿ ದೆ. ಈ ಹಿನ್ನೆಲೆಯಲ್ಲಿ ಎನ್‍ಡಿಟಿವಿ, ಆಜ್‍ತಕ್ ಹಾಗೂ ಎಬಿಪಿ ನ್ಯೂಸ್‍ಗೆ ನೋಟಿಸ್ ಜಾರಿ ಮಾಡಿರುವ ಸರ್ಕಾರ, ನಿಮ್ಮ ವಿರುದ್ಧ ಏಕೆ ಕ್ರಮ ಕೈಗೊಳ್ಳಬಾರದು ಎಂದು ಪ್ರಶ್ನಿಸಿದೆ. ಜತೆಗೆ, 15 ದಿನಗಳೊಳಗೆ ನೋಟಿಸ್‍ಗೆ ಉತ್ತರ ನೀಡುವಂತೆ ಸೂಚಿಸಿದೆ. ಅಂದು ಎಬಿಪಿ ನ್ಯೂಸ್ ಮತ್ತು ಆಜ್‍ತಕ್ ಚಾನೆಲ್‍ಗಳು ಭೂಗತ ಪಾತಕಿ ಛೋಟಾ ಶಕೀಲ್‍ನ ಸಂದರ್ಶನವನ್ನು ಪ್ರಸಾರ ಮಾಡಿ ದ್ದವು. ಯಾಕೂಬ್ ನಿರಪರಾಧಿ ಯಾಗಿದ್ದು, ರಾಷ್ಟ್ರಪತಿಯವರು ಒಂದೇ ದಿನ 4 ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿದ್ದರು ಎಂದು ಶಕೀಲ್ ಸಂದರ್ಶನದಲ್ಲಿ ಹೇಳಿದ್ದ. ಸರ್ಕಾರದ ನೋಟಿಸ್ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬ್ರಾಡ್‍ಕಾಸ್ಟ್ ಎಡಿಟರ್ಸ್ ಅಸೋಸಿಯೇಷನ್ ಈ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದೆ.
ನ್ಯಾ.ಮಿಶ್ರಾಗೆ ಬಿಗಿಭದ್ರತೆ: ಏತನ್ಮಧ್ಯೆ, ಬೆದರಿಕೆ ಪತ್ರ ಬಂದ ಹಿನ್ನೆಲೆಯಲ್ಲಿ ನ್ಯಾ. ದೀಪಕ್ ಮಿಶ್ರಾರಿಗೆ ಬುಲೆಟ್ ಪ್ರೂಫ್ ಕಾರು ಒದಗಿಸಲಾಗಿದ್ದು, ಅವರ ನಿವಾಸದಲ್ಲಿ ಅರೆಸೇನಾಪಡೆಯ ಕಮಾಂಡೋಗಳನ್ನು ನಿಯೋಜಿಸಲಾಗಿದೆ. ಯಾಕೂಬ್‍ನ ಕೊನೆಯ ಅರ್ಜಿ ತಿರಸ್ಕರಿಸಿದಾನ್ಯಾಯಮೂರ್ತಿಗಳಲ್ಲಿ ಮಿಶ್ರಾ ಕೂಡ ಒಬ್ಬರಾಗಿದ್ದರು.
ವಿಚಾರಣೆ ವೇಳೆ ಹಾಡುತ್ತಿದ್ದ: ಎನ್‍ಐಎ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗ ಉಗ್ರ ನವೇದ್ ಹಾಡು ಹಾಡುತ್ತಿದ್ದ. ಮೇ 27ರಂದು ನೂಮನ್, ಒಕಾಶಾ, ಮೊಹಮ್ಮದ್ ಭಾಯಿ ಜತೆ ಭಾರತಕ್ಕೆ ಬಂದಿದ್ದೆ. ಈ ಪೈಕಿ ನೂಮನ್ ಜೆಯುಡಿ ಮುಖ್ಯಸ್ಥ, ಮುಂಬೈ ದಾಳಿ ರೂವಾರಿ ಹಫೀಜ್ ಸಯೀದ್‍ನ ಖಾಸಗಿ ರಕ್ಷಣಾ ಸಿಬ್ಬಂದಿ ಎಂದು ತಿಳಿಸಿದ್ದಾನೆ.
ಭಾರತದ ಮಹತ್ವದ ದಾಖಲೆಗೆ ಕನ್ನ ಹಾಕಲು ಐಎಸ್‍ಐ ಸಂಚು: ಪಾಕಿಸ್ತಾನದ ಗುಪ್ತಚರ ಸಂಸ್ಥೆಗಳು ನಮ್ಮ ಆಂತರಿಕ ಸಂವಹನವನ್ನು ಕದ್ದಾಲಿಸಲು ಹಾಗೂ ಮಹತ್ವದ ಮಾಹಿತಿ ಗಳಿಗೆ ಕನ್ನ ಹಾಕಲು ಯತ್ನಿಸುತ್ತಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ. ಈ ಬಗ್ಗೆ ರಕ್ಷಣೆ, ವಿದೇಶಾಂಗ, ನಾಗರಿಕ ವಿಮಾನಯಾನ, ವಿತ್ತ, ವಿದ್ಯುತ್, ದೂರಸಂಪರ್ಕ ಸಚಿವಾಲಯಗಳಿಗೆ ಭದ್ರತಾ ಸಲಹೆಗಳನ್ನು ಕಳುಹಿಸಲಾಗಿದ್ದು, ಎಲ್ಲ ರಹಸ್ಯ ಮಾಹಿತಿಗಳನು `ಇಂಟ್ರಾನೆಟ್ ನಲ್ಲಿ (ಆಂತರಿಕ ಸಂವಹನ ಸಾಫ್ಟ್ ವೇರ್) ಅಪ್‍ಲೋಡ್ ಮಾಡುವಂತೆ ಸೂಚಿಸಲಾಗಿದೆ. ಸರ್ಕಾರಿ ಅಧಿಕಾರಿಗಳ ಕಣ್ಣಿಗೆ ಮಣ್ಣೆರಚಿ ರಹಸ್ಯ ಮಾಹಿತಿ ಕದಿಯುವ ಉದ್ದೇಶದಿಂದ ಪಾಕ್ ಐಎಸ್‍ಐ ನಮ್ಮ ಸಚಿವಾಲಯಗಳ ವೆಬ್‍ಸೈಟ್‍ಗಳನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ ಎಂದು ಸಚಿವಾಲಯ ತಿಳಿಸಿದೆ.
ಭದ್ರತೆ ಪರಿಶೀಲನೆ ಸಭೆ: 12 ಉಗ್ರರು ಕಾಶ್ಮೀರಕ್ಕೆ ನುಸುಳಿ ರುವ ಶಂಕೆ ಹಿನ್ನೆಲೆಯಲ್ಲಿ ಶನಿವಾರ ಕೇಂದ್ರ ಗೃಹ ಸಚಿವ ರಾಜನಾಥ್‍ಸಿಂಗ್ ನೇತೃತ್ವದಲ್ಲಿ ಭದ್ರತಾ ಸ್ಥಿತಿ ಪರಿಶೀಲನೆ ಸಭೆ ನಡೆದಿದೆ.
ಉಧಾಂಪುರ ದಾಳಿ ಸಯೀದ್ ಮಗನೇ ಮಾಸ್ಟರ್‍ಮೈಂಡ್
ಉಧಾಪುರದ ಬಿಎಸ್‍ಎಫ್ ಬೆಂಗಾವಲು ಪಡೆ ಮೇಲಿನ ದಾಳಿಯಲ್ಲಿ ಉಗ್ರ ಸಯೀದ್ ಪುತ್ರ ತಲ್ಹಾ ಪ್ರಮುಖ ಪಾತ್ರ ವಹಿಸಿದ್ದ. ಆತನ ಸೂಚನೆ ಮೇರೆಗೆ ಇಬ್ಬರು ಉಗ್ರರಿಗೆ ತರಬೇತಿ ನೀಡಲಾಗಿತ್ತು. ಲಷ್ಕರ್ ಚಟುವಟಿಕೆಗಳು, ಉಗ್ರರ ತರಬೇತಿ, ನೇಮಕ ಪ್ರಕ್ರಿಯೆಯನ್ನು ಈತನೇ ನೋಡಿಕೊಳ್ಳುತ್ತಾನೆ ಎಂದು ದಾಳಿ ಬಳಿಕ ಸೆರೆಸಿಕ್ಕ ಉಗ್ರ ನವೇದ್ ಅಲಿಯಾಸ್ ಉಸ್ಮಾನ್ ಖಾನ್ ವಿಚಾರಣೆ ವೇಳೆ ಬಹಿರಂಗಪಡಿಸಿದ್ದಾನೆ. ಇದೇ ವೇಳೆ, ಶನಿವಾರ ನವೇದ್‍ನ ನಾಲ್ವರು ಸಹಚರರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‍ಐಎ) ಬಂಧಿಸಿದೆ.
Advertisement