
ನವದೆಹಲಿ: ಅಪರಿಚಿತ ವ್ಯಕ್ತಿ ಕಲ್ಲು ತೂರಾಟ ನಡೆಸಿದ ಪ್ರಕರಣ ಸಂಬಂಧ ಅಲಕಾ ಲಂಬಾ ಮೇಲೆ ಕೇಳಿಬಂದಿದ್ದ ಮಳಿಗೆ ಮೇಲಿನ ದಾಳಿ ಆರೋಪವನ್ನು ಆಪ್ ಶಾಸಕಿ ಸೋಮವಾರ ತಳ್ಳಿಹಾಕಿದ್ದಾರೆ.
ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪದ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅಲಕಾ ಲಂಬಾ ಅವರು, ಸಿಸಿಟಿವಿ ದೃಶ್ಯಗಳನ್ನು ನಾನು ನೋಡಿದ್ದೇನೆ. ಈ ದೃಶ್ಯಗಳು ನನ್ನ ಮೇಲೆ ದಾಳಿಯಾದ ನಂತರವಿದ್ದ ದೃಶ್ಯಗಳು. ದಾಳಿಯಾದ ನಂತ ಆಪ್ ಪಕ್ಷದ ಓರ್ವ ಕಾರ್ಯಕರ್ತನೊಂದಿಗೆ ಮಳಿಗೆ ಬಳಿ ಹೋಗಲಾಯಿತು. ಈ ವೇಳೆ ದಾಳಿ ಮಾಡಿದ ವ್ಯಕ್ತಿ ಅಂಗಡಿಯೊಳಗೆ ಅವಿತುಕೊಂಡಿದ್ದನು. ಹೀಗಾಗಿ ಆತನನ್ನು ಹೊರಕರೆತರುವಂತೆ ಹೇಳಲಾಯಿತು. ನಾವು ಅಂಗಡಿ ಮೇಲೆ ದಾಳಿ ಮಾಡಿಲ್ಲ. ದೃಶ್ಯಗಳಲ್ಲಿ ಬಿಜೆಪಿ ಶಾಸಕ ಹಾಗೂ ದಾಳಿ ಮಾಡಿದ ವ್ಯಕ್ತಿ ಹೊರ ಬರುತ್ತಿರುವುದು ರೆಕಾರ್ಡ್ ಆಗಿದೆ ಎಂದು ಹೇಳಿದ್ದಾರೆ.
ಮಾದಕ ವ್ಯಸನ ಕುರಿತಂತೆ ಹೋರಾಟ ನಡೆಸುವ ಸಲುವಾಗಿ ಆಪ್ ಶಾಸಕಿ ಅಲಕಾ ಲಂಬಾ ಅವರು ದೆಹಲಿಯ ಕಾಶ್ಮೀರಿ ಗೇಟ್ ಪ್ರದೇಶಕ್ಕೆ ನಿನ್ನೆ ಭೇಟಿ ನೀಡಿದ್ದರು. ಈ ವೇಳೆ ಅಪರಿಚಿತ ವ್ಯಕ್ತಿಯೋರ್ವ ಶಾಸಕಿ ಮೇಲೆ ಕಲ್ಲು ತೂರಾಟ ನಡೆಸಿದ್ದನು. ಇದರಿಂದಾಗಿ ಆಪ್ ಶಾಸಕಿಯ ತಲೆಗೆ ಗಂಭೀರವಾಗಿ ಗಾಯವಾಗಿತ್ತು. ಗಾಯಗೊಂಡಿದ್ದ ಶಾಸಕಿಯನ್ನು ಅರುಣಾ ಅಸಫ್ ಅಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ದಾಳಿ ಕುರಿತಂತೆ ಬಿಜೆಪಿ ಮೇಲೆ ಆರೋಪ ವ್ಯಕ್ತಪಡಿಸಿದ್ದ ಆಪ್, ಅಲಕಾ ಲಂಬಾಗೆ ತಲೆಗೆ ಕಲ್ಲು ಹೊಡೆದವನು ಸಮೀಪದ ಸಿಹಿ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಾಗಿದ್ದು, ಈ ಅಂಗಡಿ ಬಿಜೆಪಿ ಶಾಸಕ ಓಂ ಪ್ರಕಾಶ್ ಶರ್ಮಾಗೆ ಸೇರಿದ್ದಾಗಿದೆ ಎಂದು ಅಲ್ಲಿನ ಸ್ಥಳೀಯರು ಹೇಳಿದ್ದಾರೆಂದು ಆರೋಪ ವ್ಯಕ್ತಪಡಿಸಿತ್ತು.
ಪ್ರಕರಣ ಕುರಿತಂತೆ ತನಿಖೆ ನಡೆಸಿದ್ದ ಪೊಲೀಸರು ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಸಿಸಿಟಿವಿ ದೃಶ್ಯಾವಳಿಯಲ್ಲಿ ಆಪ್ ಶಾಸಕಿ ನೇರವಾಗಿ ಅಂಗಡಿಯ ಬಳಿ ಹೋಗಿ ಸ್ಥಳದಲ್ಲಿದ್ದ ವಸ್ತುವನ್ನು ಕೆಳಗೆ ತಳ್ಳಿ ಎಚ್ಚರಿಕೆ ನೀಡುತ್ತಿರುವುದಾಗಿ ಕಂಡುಬಂದಿದೆ. ಶಾಸಕಿ ಎಚ್ಚರಿಕೆ ನೀಡುತ್ತಿದ್ದಂತೆ ಅವರ ಹಿಂದಿದ್ದ ಆಪ್ ಕಾರ್ಯಕರ್ತರು ಅಂಗಡಿಯ ಮೇಲೆ ದಾಳಿ ಮಾಡಲು ಹೋಗುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
Advertisement