ಸಂಸತ್ ಅಧಿವೇಶನ ವ್ಯರ್ಥವಾಗಲು ಮೋದಿ ಮೊಂಡುತನವೇ ಕಾರಣ: ಕಾಂಗ್ರೆಸ್

ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡುತಿರುವ ಕಾಂಗ್ರೆಸ್, ಅಧಿವೇಶನ ವ್ಯರ್ಥವಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ರಾಮಾಣಿಕತೆ ಮತ್ತು ಮೊಂಡುತನವೇ ಕಾರಣ ಎಂದು ಆರೋಪಿಸಿದೆ.
ಕಾಂಗ್ರೆಸ್ ಪ್ರತಿಭಟನೆ
ಕಾಂಗ್ರೆಸ್ ಪ್ರತಿಭಟನೆ

ನವದೆಹಲಿ: ಸಂಸತ್ ನ ಮುಂಗಾರು ಅಧಿವೇಶನ ಪ್ರಾರಂಭವಾದ ದಿನದಿಂದಲೂ ಪ್ರತಿಭಟನೆ ನಡೆಸಿ ಕಲಾಪಕ್ಕೆ ಅಡ್ಡಿ ಉಂಟು ಮಾಡುತಿರುವ ಕಾಂಗ್ರೆಸ್, ಅಧಿವೇಶನ ವ್ಯರ್ಥವಾಗುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಅಪ್ರಾಮಾಣಿಕತೆ ಮತ್ತು ಮೊಂಡುತನವೇ ಕಾರಣ ಎಂದು ಆರೋಪಿಸಿದೆ.

ಯುಪಿಎ ಸರ್ಕಾರದಲ್ಲೂ ಇದೇ ರೀತಿ ಪ್ರತಿಭಟನೆ ನಡೆಸುತ್ತಿದ್ದ ಬಿಜೆಪಿ ದೇಶದ ಪ್ರಗತಿಗೆ ಅಡ್ಡಿ ಉಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ.

ಪ್ರಮುಖ ವಿಧೆಯಕಗಳ ಅಂಗೀಕಾರಕ್ಕೆ ತಡೆಯೊಡ್ಡಿರುವ ಕಾಂಗ್ರೆಸ್, ದೇಶದ ಅಭಿವೃದ್ಧಿಗೆ ಅಡ್ಡಿಯುಂಟು ಮಾಡಲು ಸಂಸತ್ ನನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಪ್ರಧಾನಿ ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನ ವಕ್ತಾರ ಆನಂದ್ ಶರ್ಮಾ, ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ವಿರೋಧ ಪಕ್ಷಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಿಲ್ಲ, ಸಂಸತ್ ಕಲಾಪವನ್ನು ಬಗ್ಗೆ ಪ್ರಧಾನಿ ಮೋದಿಗೆ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಧಾನಿ ಎಲ್ಲಾ ವಿಷಯಗಳ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ಸಂಸತ್ ಕಲಾಪದಲ್ಲಿ ಉಂಟಾಗಿರುವ ಬಿಕ್ಕಟ್ಟನ್ನು ಬಗೆಹರಿಸಲು ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಶರ್ಮಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟಾಗಿಯೂ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಸಂಸತ್ ಅಧಿವೇಶನ ವ್ಯರ್ಥವಾಗಲು ಕಾಂಗ್ರೆಸ್ ಕಾರಣ ಎಂದು ಆರೋಪಿಸುತ್ತಿರುವುದು ಸೂಕ್ತ ಅಲ್ಲ ಎಂದು ಹೇಳಿದ್ದಾರೆ.

ಕಾನೂನನ್ನು ಪುನರಚಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ ಪ್ರಧಾನಿ ಮೊಂಡುತನ ಪ್ರದರ್ಶಿಸಿದ್ದಕ್ಕಾಗಿ ಸಂಸತ್ ಅಧಿವೇಶನದಲ್ಲಿ ಗದ್ದಲ ಉಂಟಾಗಿ ಕಲಾಪ ವ್ಯರ್ಥವಾಗಿದೆ ಎಂದು ಶರ್ಮಾ ಅಭಿಪ್ರಾಯಪಟ್ಟಿದ್ದಾರೆ. ಜಿ.ಎಸ್.ಟಿ ವಿಧೇಯಕ ಸೇರಿದಂತೆ ಹಲವು ಮಸೂದೆಗಳಲ್ಲಿ ಕೇಂದ್ರ ಸರ್ಕಾರ ಕಾನೂನನ್ನು ಉಲ್ಲಂಘಿಸಿದೆ. ಈ ಬಗ್ಗೆ ಸಂಸತ್ ನಲ್ಲಿ ಚರ್ಚೆ ನಡೆಯದೇ ಇರುವುದರ ಬಗ್ಗೆ ಸರ್ಕಾರ ಸ್ಪಷ್ಟನೆ ನೀಡಬೇಕು. ಯುಪಿಎ ಸರ್ಕಾರ ಜಿ.ಎಸ್.ಟಿ ಸೇರಿದಂತೆ ಹೊಸ ನಿಯಮಗಳನ್ನು ಪರಿಚಯಿಸಿದಾಗ ಅಂದಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ಲೋಕಸಭೆಯ ಪ್ರತಿಪಕ್ಷ ನಾಯಕಿಯಾಗಿದ್ದ ಸುಷ್ಮಾಸ್ವರಾಜ್, ಅರುಣ್ ಜೇಟ್ಲಿ  ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಇದನ್ನು ಆಡಳಿತ ನಡೆಸುತ್ತಿರುವ ಬಿಜೆಪಿ ಸದಸ್ಯರು ನೆನಪಿಸಿಕೊಳ್ಳಬೇಕಿದ್ದು, ಯುಪಿಎ ಅವಧಿಯಲ್ಲಿ ದೇಶದ ಅಭಿವೃದ್ಧಿಗೆ ಅಡ್ಡಿ ಉಂಟು ಮಾಡಿದ್ದಕ್ಕಾಗಿ ಕ್ಷಮೆ ಕೇಳಬೇಕೆಂದು ಆನಂದ್ ಶರ್ಮಾ ಒತ್ತಾಯಿಸಿದ್ದಾರೆ.

ಲಲಿತ್ ಮೋದಿ ಪ್ರಕರಣ, ವ್ಯಾಪಂ ಹಗರಣವನ್ನು ಮುಂದಿಟ್ಟುಕೊಂಡು ಸಂಸತ್ ಅಧಿವೇಶನದ ಮೊದಲ ದಿನದಿಂದ ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್, ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್, ರಾಜಸ್ತಾನ ಮುಖ್ಯಮಂತ್ರಿ ವಸುಂದರಾ ರಾಜೆ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ರಾಜೀನಾಮೆಗೆ ಒತ್ತಾಯಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com