

ಪಾಟ್ನಾ: ಈ ವರ್ಷಾಂತ್ಯಕ್ಕೆ ನಡೆಯುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಬಿಜೆಪಿಯನ್ನು ಮಣಿಸಲು ನಿರ್ಧರಿಸಿರುವ ಜೆಡಿಯು, ಆರ್‌ಜೆಡಿ ಹಾಗೂ ಕಾಂಗ್ರೆಸ್ ಬುಧವಾರ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿವೆ.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸ್ಥಾನ ಹೊಂದಾಣಿಕೆಗೆ ಮೂರು ಪಕ್ಷಗಳು ಸಹಮತ ಸೂಚಿಸಿವೆ ಎಂದು ಬಿಹಾರ ಮುಖ್ಯಮಂತ್ರಿ ನಿತಿಶ್ ಕುಮಾರ್ ಅವರು ತಿಳಿಸಿದ್ದಾರೆ.
ಇಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹಾಗೂ ಕಾಂಗ್ರೆಸ್ ನಾಯಕ ಸಿ.ಪಿ.ಥಾಕೂರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿ ಮಾತನಾಡಿದ ನಿತಿಶ್ ಕುಮಾರ್, ಜೆಡಿಯು ಮತ್ತು ಆರ್‌ಜೆಡಿ ತಲಾ 100 ಸ್ಥಾನಗಳಲ್ಲಿ ಹಾಗೂ ಕಾಂಗ್ರೆಸ್ 40 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಹೇಳಿದರು. ಬಿಹಾರ ವಿಧಾನಸಭೆ ಒಟ್ಟು 243 ಸ್ಥಾನಗಳನ್ನು ಹೊಂದಿದೆ.
ಇದೇ ವೇಳೆ ಮಾತನಾಡಿದ ಲಾಲು ಪ್ರಸಾದ್ ಯಾದವ್, ಚುನಾವಣೆ ಹಿನ್ನೆಲೆಯಲ್ಲಿ ಇದೇ ತಿಂಗಳು 30ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ 'ಸ್ವಾಭಿಮಾನ್ ರ್ಯಾಲಿ' ನಡೆಸಲಾಗುವುದು ಎಂದು ತಿಳಿಸಿದರು.
ಈ ಬೃಹತ್ ಸ್ವಾಭಿಮಾನ್ ರ್ಯಾಲಿಯಲ್ಲಿ ಮೂರು ಪಕ್ಷಗಳು ನಾಯಕರು ಭಾಗಿಯಾಗಿ ಒಗ್ಗಟ್ಟು ಪ್ರದರ್ಶಿಸಲಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿ.ಪಿ.ಥಾಕೂರ್ ಅವರ ಹೇಳಿದರು.