
ನವದೆಹಲಿ: ಮುಂಗಾರು ಅಧಿವೇಶನ ಮುಗಿಯಲು ಇನ್ನು ಕೇವಲ 3 ದಿನವಷ್ಟೇಬಾಕಿಯಿದೆ. ಪೂರ್ತಿ ಅಧಿವೇಶನವನ್ನು ಗದ್ದಲದಲ್ಲೇ ಕೊಚ್ಚಿಹೋಗುವಂತೆ ಮಾಡಿದ ಪ್ರತಿಪಕ್ಷ ಕಾಂಗ್ರೆಸ್ ಮಂಗಳವಾರವೂ ತನ್ನ ಪಟ್ಟು ಸಡಿಲಿಸಲಿಲ್ಲ.
ಕಲಾಪ ಆರಂಭಾಗುತ್ತಲೇ ಪ್ರತಿಭಟತನೆ ಶುರು ಮಾಡಿದ ಕಾಂಗ್ರೆಸ್ ಸದಸ್ಯರು, ಒಂದು ಹಂತದಲ್ಲಿ ಲೋಕಸಭೆ ಉಪಸ್ಪೀಕರ್ ಮೇಲೆ ಕಾಗದ ಹರಿದೆಸೆದರು. ಇದರಿಂದ ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ತೀವ್ರ ಭಾವೋದ್ವೇಗಕ್ಕೊಳಗಾದರು. ಎಂದೂ ತಾಳ್ಮೆಕಳೆದುಕೊಳ್ಳದ ಸುಮಿತ್ರಾಅವರು ತೀವ್ರ ಕೋಪೋದ್ರಿಕ್ತರಾಗಿ,``ನೀವು ನಲ್ವತ್ತೈವತ್ತು ಮಂದಿ 440 ಸದಸ್ಯರ ಹಕ್ಕನ್ನು ಕಿತ್ತುಕೊಳ್ಳುತ್ತಿದ್ದೀರಿ.
ನಿಮ್ಮ ಪ್ರತಿಭಟನೆ ಪ್ರಜಾಸತ್ತಾತ್ಮಕವಾಗಿಲ್ಲ. ನೀವು ಪ್ರತಿಭಟನೆ ಮೂಲಕ ಪ್ರಜಾಪ್ರಭುತ್ವದ ಕೊಲೆ ಮಾಡುತ್ತಿದ್ದೀರಿ'' ಎಂದು ಹರಿಹಾಯ್ದರು. ಇಷ್ಟಾದರೂ ಕಾಂಗ್ರೆಸ್ ಸದಸ್ಯರು ಮಾತ್ರ ತಮ್ಮ ಪ್ರತಿಭಟನೆ ಮುಂದುವರೆಸಿದರು.
ಟಿವಿಯಲ್ಲಿ ತೋರಿಸಿ: ಒಂದು ಹಂತದಲ್ಲಿ, ``ಕಾಂಗ್ರೆಸಿಗರು ಎಷ್ಟು ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆಂಬುದನ್ನು ಇಡೀ ದೇಶವೇ ನೋಡಲಿ,ಅವರ ಪ್ರತಿಭಟನೆಯನ್ನು ಟಿವಿಯಲ್ಲಿ (ಲೋಕಸಭಾ ಟಿವಿ) ತೋರಿಸಿ'' ಎಂದರು ಸ್ಪೀಕರ್.
ನೀವು ಎಷ್ಟೇ ಕಿರುಚಿದರೂ, ಏನೇ ಮಾಡಿದರೂ ನಾನು ಕಲಾಪ ಮುಂದೂಡುವುದಿಲ್ಲ, ನಿಮಗಾಗಿ ಸದನದಲ್ಲಿರುವ ಸದಸ್ಯರ ಹಕ್ಕು ಮೊಟಕುಗೊಳಿಸುವುದಿಲ್ಲ ಎಂದರಲ್ಲದೇ, ಗದ್ದಲದ ನಡುವೆಯೀ ಕಲಾಪ ಮುಂದುವರೆಸಿದರು. ಭಿತ್ತಿ ಪತ್ರ ಪ್ರದರ್ಶಿಸಬಾರದು ಎಂದು ಆರಂಭದಿಂದಲೂ ಹೇಳುತ್ತಲೇ ಬಂದಿದ್ದೇನೆ. ನೀವು ಸ್ವೀಕರ್ ಸ್ಥಾನಕ್ಕೆ ಅವಮಾನ ಮಾಡುತ್ತಿದ್ದೀರಿ ಎಂದೂ ಹೇಳಿದರು.
ಸದನದಲ್ಲಿ ಹಾಜರಿದ್ದ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಆಡ್ವಾಣಿ ಅವರು ಗೃಹ ಸಚಿವ ರಾಜನಾಥ್ ಬಳಿ ಕಲಾಪಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಆಗ ಸಚಿವ ವೆಂಕಯ್ಯನಾಯ್ಡು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ನೀವು ಕೆಲವೇ ಜನ ಇಡೀ ಸದನ ಹಾಳು ಮಾಡಲು ಬಿಡುವುದಿಲ್ಲ. ಏನಿದು ತಮಾಷೆ ನಿಮ್ಮದು? ಸ್ವೀಕರ್ ಮನೆಗೆ ನುಗ್ಗಿ ಗಲಾಟೆ ಮಾಡುತ್ತೀರಿ, ಇಲ್ಲಿ ಭಿತ್ತಿಪತ್ರ ಪ್ರದರ್ಶಿಸುತ್ತೀರಿ ಎಂದು ತರಾಟೆ ತೆಗೆದುಕೊಂಡರು.
Advertisement