
ನವದೆಹಲಿ: ಮ್ಯಾಗಿ ನ್ಯೂಡಲ್ಸ್ ಗೆ ಸಂಬಂಧಿಸಿದಂತೆ ನೆಸ್ಲೆ ಕಂಪನಿ ನಿಯಮಬಾಹಿರ ವಹಿವಾಟು ಮತ್ತು ಜನರನ್ನು ತಪ್ಪುದಾರಿಗೆ ಎಳೆಯುವ ಜಾಹೀರಾತು ನೀಡಿರುವುದಕ್ಕೆ ರು.640 ಕೋಟಿ ದಂಡ ಪಾವತಿಸಬೇಕೆಂದು ಕೇಂದ್ರ ಸರ್ಕಾರ ಗ್ರಾಹಕ ನ್ಯಾಯಾಲಯ (ಎನ್ ಸಿಡಿಆರ್ ಸಿ)ಕ್ಕೆ ಹೋಗಲಿದೆ.
ಈ ಕುರಿತಂತೆ ರಾಷ್ಟ್ರೀಯ ಗ್ರಾಹಕ ವಿವಾದ ಪರಿಹಾರ ಆಯೋಗದಲ್ಲಿ ಪ್ರಕರಣ ದಾಖಲಿಸಲಿದ್ದು ದಂಡ ಸೇರಿದಂತೆ ಇತರ ಕಾನೂನು ಕ್ರಮ ಜರುಗಿಸುವಂತೆ ಮನವಿ ಮಾಡಲಿದೆ. ಪ್ರಕರಣ ದಾಖಲಿಸುವುದಕ್ಕೆ ಸಂಬಂಧಪಟ್ಟ ಸಚಿವರು ಅನುಮೋದನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮ್ಯಾಗಿ ನೂಡಲ್ಸ್ ಗುಣಮಟ್ಟದಲ್ಲಿ ಲೋಪವಾಗಿರುವುದು ಗಂಭೀರ ವಿಷಯವಾಗಿದೆ.
ಈ ಕುರಿತು ಎನ್‍ಸಿಡಿಆರ್ ಸಿ ತನಿಖೆ ನಡೆಸಲಿದ್ದು ಸೂಕ್ರ ಕ್ರಮ ಜರುಗಿಸಲಿದೆ ಎಂದು ಗ್ರಾಹಕ ವ್ಯವಹಾರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದಾರೆ. ಸಾಮಾನ್ಯವಾಗಿ ಎನ್‍ಸಿಡಿಆರ್ ಸಿ ಗ್ರಾಹಕರ ದೂರುಗಳನ್ನು ಮಾತ್ರ ವಿಚಾರಣೆ ನಡೆಸಲಿದೆ. ಆದರೆ ಈ 1986ರ ಕಾಯ್ದೆಯಡಿ ಸರ್ಕಾರ ಸಹ ದೂರನ್ನು ದಾಖಲಿಸಬಹುದಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆರಡೂ ದೂರು ದಾಖಲಿಸಬಹುದು. ಈ ಕಾಯ್ದೆಯನ್ನು ಇದೇ ಮೊದಲ ಬಾರಿಗೆ ಸರ್ಕಾರವೊಂದು ಬಳಸಿಕೊಳ್ಳುತ್ತಿದೆ. ಮ್ಯಾಗಿ ನೂಡಲ್ಸ್‍ನಲ್ಲಿ ಮಿತಿಗಿಂತಲೂ ಹೆಚ್ಚು ಸೀಸವಿದ್ದು ಸೇವನೆಗೆ ಸುರಕ್ಷಿತವಲ್ಲ ಎಂದು ಭಾರತೀಯ ಆಹಾರ ಗುಣಮಟ್ಟ ಪ್ರಾಧಿಕಾರ ವರದಿ ನೀಡಿತ್ತು. ಇದರ ಬೆನ್ನಲ್ಲೆ ಹಲವು ರಾಜ್ಯಗಳು ಮ್ಯಾಗಿ ನೂಡಲ್ಸ್‍ನ್ನು ನಿಷೇಧಿಸಿದ್ದವು.
ನೆಸ್ಲೆ ಕಂಪನಿ ಲೇಬಲ್ ನಿಯಮಗಳನ್ನೂ ಉಲ್ಲಂಘಿಸಿದೆ ಎಂತಲೂ ಹೇಳಿತ್ತು. ಮ್ಯಾಗಿ ನೂಡಲ್ಸ್‍ನಲ್ಲಿ 2.5 ಪಿಪಿಎಂ ಮಿತಿಗಿಂತಲೂ ಹೆಚ್ಚು ಸೀಸವಿದೆ. ಇದೇ ಸಂದರ್ಭದಲ್ಲಿ ಉತ್ಪನ್ನದಲ್ಲಿರುವ ಮಾನೋ ಸೋಡಿಯಂ ಗ್ಲೂಟಮೇಟ್ ಪ್ರಮಾಣದ ಕುರಿತ ಮಾಹಿತಿಯನ್ನು ಸರಿಯಾಗಿ ನೀಡಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನದ್ದಾ ಮಂಗಳವಾರ ಹೇಳಿದ್ದಾರೆ.
ನೂಡಲ್ಸ್‍ನ್ನು ಹಲವು ರಾಜ್ಯಗಳಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲ ವರದಿಗಳಲ್ಲೂ ಸೀಸದ ಪ್ರಮಾಣ ಹೆಚ್ಚಾಗಿರುವುದು ಕಂಡು ಬಂದಿದೆ. ಇದರಿಂದ ಎಲ್ಲ ಉತ್ಪನ್ನವನ್ನು ಹಿಂಪಡೆಯುವಂತೆ ಎಫ್ಎಸ್‍ಎಸ್‍ಎಐ ನೆಸ್ಲೆ ಕಂಪನಿಗೆ ಸೂಚಿಸಿತು ಎಂದು ತಿಳಿಸಿದ್ದಾರೆ. ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ2006ರನ್ನು ಅನುಷ್ಠಾನಕ್ಕೆ ತರುವ ಅಧಿಕಾರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿದೆ. ಹೀಗಾಗಿ ರಾಜ್ಯಗಳು ಹಾನಿಕಾರಕ ಆಹಾರವನ್ನು ನಿಷೇಧಿಸುವ ಅಧಿಕಾರ ಹೊಂದಿವೆ ಎಂದು ಹೇಳಿದ್ದಾರೆ.
Advertisement