ದೇವ ಮಹಿಳೆ ರಾಧೆ ಮಾ ವಿರುದ್ಧ ಮತ್ತೊಂದು ಕೇಸ್ ದಾಖಲು
ಮುಂಬೈ: ಮೂಢಾಚರಣೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸ್ವಯಂಘೋಷಿತ ವಿವಾದಿತ ದೇವ ಮಹಿಳೆ ರಾಧೆ ಮಾ ವಿರುದ್ಧ ಬುಧವಾರ ಮತ್ತೊಂದು ಪ್ರಕರಣ ದಾಖಲಾಗಿದೆ.
ವಕೀಲ ಅಶೋಕ್ ರಜಪುತ್ ಅವರು ರಾಧೆ ಮಾ ವಿರುದ್ಧ ಮುಂಬೈ ಬೊರಿವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅಸಭ್ಯ ವರ್ತನೆ ಹಾಗೂ ಮೂಢಾಚರಣೆ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ.
ರಾಧೆ ಮಾ ವಿರುದ್ಧ ಮತ್ತೊಂದು ದೂರು ಬಂದಿದ್ದು, ಪರಿಶೀಲಿಸಲಾಗುತ್ತಿದೆ ಎಂದು ಮುಂಬೈ ಪೊಲೀಸ್ ವಕ್ತಾರ ಧನಂಜಯ್ ಕುಲಕರ್ಣಿ ಅವರು ತಿಳಿಸಿದ್ದಾರೆ.
'ಪ್ರಾಥಮಿಕ ತನಿಖೆಯ ನಂತರ, ಮೂಢಾಚರಣೆಗೆ ಪ್ರಚೋದನೆ ನೀಡಿದ ಬಗ್ಗೆ ಸಾಂದರ್ಭಿಕ ಸಾಕ್ಷ್ಯಗಳು ಪತ್ತೆಯಾದರೆ, ರಾಧೆ ಮಾ ವಿರುದ್ಧ ಮೂಢಾಚರಣೆ ವಿರೋಧಿ ಕಾನೂನಿನಡಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು' ಎಂದು ಅವರು ಹೇಳಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ರಾಧೆ ಮಾ ಅವರ ವಿರುದ್ಧ ಮಹಿಳೆಯೊಬ್ಬರು, ವರದಕ್ಷಿಣೆ ಕಿರುಕುಳ ಕೇಸ್ ದಾಖಲಿಸಿದ್ದರು. ದೇವ ಮಹಿಳೆ ಸೂಚನೆ ಮೇರೆಗೆ ನನ್ನ ಗಂಡನ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಿದ್ದರಲ್ಲದೇ, ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದೀಗ ನನ್ನ ಪತಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದು, ನನ್ನ ಪೋಷಕರಿಗೆ ಜೀವ ಬೆದರಿಕೆ ಹಾಕಿದ್ದಾರೆ. ಇದರಲ್ಲಿ ರಾಧೆ ಮಾ ಅವರ ಕೈ ವಾಡಿ ಇದೆ ಎಂದು ಬೊರಿವಲಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಪೊಲೀಸರು ಈಗಾಗಲೇ ರಾಧೆ ಮಾಗೆ ನೋಟಿಸ್ ಸಹ ಜಾರಿ ಮಾಡಿದ್ದಾರೆ.


