ಬೆಳೆ ಸಾಲ ಮನ್ನಾಕ್ಕೆ ಬಿಎಸ್‍ವೈ ಒತ್ತಾಯ
ನವದೆಹಲಿ: ರೈತರ ಆತ್ಮಹತ್ಯೆ ತಡೆಯಲು ಕರ್ನಾಟಕ ಸರ್ಕಾರ ತಕ್ಷಣವೇ ಬೆಳೆ ಸಾಲ ಮನ್ನಾ ಮಾಡಬೇಕು ಹಾಗೂ ರಾಷ್ಟ್ರೀಯ ಬ್ಯಾಂಕುಗಳಲ್ಲಿ ರೈತರು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡಬೇಕು ಎಂದು ಲೋಕಸಭೆಯಲ್ಲಿ ಬಿಜೆಪಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಆಗ್ರಹಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಯಡಿಯೂರಪ್ಪ ಕನ್ನಡದಲ್ಲೇ ಮಾತನಾಡಿದರು. ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ರೈತರ ನೆರವಿಗೆ ಬರುವಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಸಂಕಷ್ಟದಲ್ಲಿರುವ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ರೈತರ ಪರವಾಗಿ ಹೋರಾಟ ಮಾಡದ ಕಾಂಗ್ರೆಸ್ ಸದಸ್ಯರು ಲೋಕಸಭೆಯಲ್ಲಿ ಪ್ರತಿಭ ಟನೆ ನಡೆಸಿ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದರು.
ಕಳೆದ 25 ವರ್ಷಗಳಲ್ಲಿ ಕಾಣದಂತಹ ಭೀಕರ ಬರ ಕರ್ನಾಟಕದಲ್ಲಿದೆ. 130 ತಾಲೂಕುಗಳು ಬರಪೀಡಿತವಾಗಿವೆ. ತೀವ್ರ ಮಳೆ ಅಭಾವದಿಂದಾಗಿ ಅಣೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಕುಸಿದಿದೆ. ಕೃಷ್ಣಾ ಕಣಿವೆಯಲ್ಲಿ 123 ಟಿಎಂಸಿ ಸಾಮಥ್ರ್ಯದ ಆಲಮಟ್ಟಿ ಆಣೆಕಟ್ಟೆಯಲ್ಲಿ ಕಳೆದ ವರ್ಷ ಈ ವೇಳೆ 102 ಟಿಎಂಸಿ ನೀರು ಸಂಗ್ರವಾಗಿತ್ತು. ಈ ವರ್ಷ 55 ಟಿಎಂಸಿ ಮಾತ್ರ ಇದೆ.
ರಾಜ್ಯದ ಎಲ್ಲಾ ಜಲಾಶಯಗಳಲ್ಲಿ ಕಳೆದ ವರ್ಷ 297 ಟಿಎಂಸಿ ನೀರು ಸಂಗ್ರವಾಗಿದ್ದರೆ ಈ ವರ್ಷ 201 ಟಿಎಂಸಿ ಇದೆ. ಕಾವೇರಿ ಕಣಿವೆಯಲ್ಲಿ 115 ಟಿಎಂಸಿ ಸಂಗ್ರಹ ಸಾಮಥ್ರ್ಯವಿದ್ದು ಕಳೆದ ಸಾಲಿನಲ್ಲಿ 93 ಟಿಎಂಸಿ ಸಂಗ್ರವಿದ್ದರೆ, ಈಗ ಟಿಎಂಸಿ 84 ಮಾತ್ರ ಇದೆ. 2015-16ನೇ ಸಾಲಿನಲ್ಲಿ ಮುಂಗಾರು ಹಂಗಾಮಿಗೆ ನೀರಾವರಿ ಪ್ರದೇಶದಲ್ಲಿ 31.71 ಲಕ್ಷ ಹೆಕ್ಟೇರ್ ಮತ್ತು ಮಳೆ ಆಶ್ರಿತ ಪ್ರದೇಶದಲ್ಲಿ 71.66 ಲಕ್ಷ ಹೆಕ್ಟೇರ್ ಪ್ರದೇಶ ಸೇರಿದಂತೆ 111.37 ಲಕ್ಷ ಹೆಕ್ಟೆರ್‍ನಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ. ಈವರೆಗೆ ನೀರಾವರಿ ಪ್ರದೇಶದಲ್ಲಿ ಕೇವಲ 9.7 ಲಕ್ಷ ಹೆಕ್ಟೇರ್, ಮಳೆ ಆಶ್ರಿತ ಪ್ರದೇಶದಲ್ಲಿ 30.7 ಲಕ್ಷ ಹೆಕ್ಟೇರ್ ಮಾತ್ರ ಬಿತ್ತನೆ ಆಗಿದೆ. ಈ ಪೈಕಿ ಶೇ. 80ರಷ್ಟು ಪ್ರದೇಶದಲ್ಲಿ ಮಳೆಯಿಲ್ಲದೇ ಬೆಳೆ ಒಣಗಿದೆ. ಜನ ಬೀದಿಪಾಲಾಗಿದ್ದರೆ. ಜಾನುವಾರುಗಳಗೆ ಕುಡಿಯುವ ನೀರು ಮತ್ತು ಮೇವಿನ ಕೊರತೆ ಇದೆ ಎಂದು ಅಂಕಿಅಂಶದ ಸಮೇತ ವಿವರಿಸಿದರು.
ರಾಜ್ಯದ ತೆಂಗು, ದ್ರಾಕ್ಷಿ, ದಾಳಿಂಬೆ, ಕಾಫಿ ಬೆಳೆಗಾರರೂ ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಒಣಬೇಸಾಯ ಮಾಡಿದ ರೈತರಿಗೆ ಪ್ರತಿ ಹೆಕ್ಟೇರ್‍ಗೆ ತಕ್ಷಣವೇ 20 ಸಾವಿರ ರುಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ ಅವರು, ದ್ರಾಕ್ಷಿ, ಕಾಫಿ, ದಾಳಿಂಬೆ, ತೆಂಗು ಬೆಳೆ ನಷ್ಟವಾದ ರೈತರಿಗೆ ಪರಿಹಾರ ನೀಡಲು ಶೇ.75ರಷ್ಟು ಕೇಂದ್ರದಿಂದ ಅನುದಾನ ನೀಡುವುದಾಗಿ ಹಣಕಾಸು ಸಚಿವರು ಭರವಸೆ ನೀಡಿದ್ದರೂ, ರಾಜ್ಯ ಸರ್ಕಾರ ತನ್ನ ಪಾಲು ಶೇ 25ರಷ್ಟು ಭರಿಸಲು ಮುಂದೆ ಬಂದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ