ಗದ್ದಲ, ಕೋಲಾಹಲಗಳಲ್ಲಿಯೇ ಮುಗಿದ ಮುಂಗಾರು ಅಧಿವೇಶನ

ಸಂಸತ್ತಿನ ಮುಂಗಾರು ಅಧಿವೇಶನದ ಇಂದಿಗೆ ಕೊನೆಯಾಗಿದ್ದು, ಯಾವುದೇ ಮಹತ್ವದ ಚರ್ಚೆ, ನಿರ್ಣಯಗಳಿಲ್ಲದೆ ಬರೀ ಗದ್ದಲ, ಕೋಲಾಹಲಗಳಲ್ಲಿಯೇ...
ಸಂಸತ್ತು ಅಧಿವೇಶನದ ಸಾಂದರ್ಭಿಕ ಚಿತ್ರ
ಸಂಸತ್ತು ಅಧಿವೇಶನದ ಸಾಂದರ್ಭಿಕ ಚಿತ್ರ

ನವದೆಹಲಿ: ಸಂಸತ್ತಿನ ಮುಂಗಾರು ಅಧಿವೇಶನದ ಇಂದಿಗೆ ಕೊನೆಯಾಗಿದ್ದು, ಯಾವುದೇ ಮಹತ್ವದ ಚರ್ಚೆ, ನಿರ್ಣಯಗಳಿಲ್ಲದೆ ಬರೀ ಗದ್ದಲ, ಕೋಲಾಹಲಗಳಲ್ಲಿಯೇ ಕಳೆದುಹೋಯಿತು. ಎರಡೂ ಸದನಗಳ ಕಲಾಪಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ.

ನಿನ್ನೆ ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲಿಯೂ ಆಡಳಿತ ಪಕ್ಷ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ತೀವ್ರ ವಾಗ್ದಾಳಿ ನಡೆದವು. ಸುಷ್ಮಾ ಸ್ವರಾಜ್ ಮತ್ತು ರಾಹುಲ್ ಗಾಂಧಿ ಅವರು ಪರಸ್ಪರ ಮಾತಿನ ಚಕಮಕಿ ನಡೆಸಿದ್ದರು.

ಕೇಂದ್ರ ಸರ್ಕಾರದ ಉದ್ದೇಶಿತ ಸರಕು ಮತ್ತು ಸೇವಾ ತೆರಿಗೆ ವಿಧೇಯಕ ಮೇಲ್ಮನೆಯಲ್ಲಿ ಅಂಗೀಕಾರವಾಗದೆ ಉಳಿದಿದೆ. ಇದಕ್ಕಾಗಿ ವಿಧೇಯಕಕ್ಕೆ ಉತ್ತೇಜನ ಸಿಗಲು ವಿಶೇಷ ಅಧಿವೇಶನವನ್ನು ಕರೆಯಲು  ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಇಂದು ಸಭೆ ಸೇರಿ ಚರ್ಚೆ ನಡೆಸಲಿದೆ.

ಮುಂಗಾರು ಅಧಿವೇಶನ ಆರಂಭಗೊಂಡ ದಿನದಿಂದ ಲಲಿತ್ ಮೋದಿಗೆ ವೀಸಾ ನೆರವು ನೀಡಿಕೆ ಮತ್ತು ಮಧ್ಯಪ್ರದೇಶದ ವ್ಯಾಪಂ ಹಗರಣಕ್ಕೆ ಸಂಬಂಧಪಟ್ಟಂತೆ ಸುಷ್ಮಾ ಸ್ವರಾಜ್, ವಸುಂಧರಾ ರಾಜೆ ಮತ್ತು ಶಿವರಾಜ್ ಸಿಂಗ್ ಚೌಹಾಣ್ ಅವರ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ಸಂಸತ್ತಿನ ಎರಡೂ ಸದನಗಳಲ್ಲಿ ಪ್ರತಿಭಟನೆ ಆರಂಭಿಸಿದ್ದವು. ಆದರೆ ಯಾರೊಬ್ಬರೂ ರಾಜೀನಾಮೆ ನೀಡುವುದಿಲ್ಲ, ಚರ್ಚೆಗೆ ಸಿದ್ಧ ಎಂದು ಆರಂಭದಿಂದಲೂ ಸರ್ಕಾರ ಹೇಳಿಕೊಂಡು ಬಂದಿತ್ತು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಲಲಿತ್ ಮೋದಿಯನ್ನು ವಾಪಸು ಕರೆಸಿಕೊಳ್ಳುವಂತೆ ನಾವು ಸರ್ಕಾರವನ್ನು ಒತ್ತಾಯಿಸುತ್ತಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಭೀತಿಗೊಂಡಿದ್ದಾರೆ ಎಂದು ಹೇಳಿದರು.

17 ದಿನಗಳ ಕಾಲ ನಡೆದ ಮುಂಗಾರು ಅಧಿವೇಶನ ಹಲವು ಘಟನೆಗಳಿಗೆ ಸಾಕ್ಷಿಯಾಯಿತು. ಕಲಾಪ ಸರಿಯಾಗಿ ನಡೆಯಲು ಬಿಡುತ್ತಿಲ್ಲ, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು  ಲೋಕಸಭಾಧ್ಯಕ್ಷೆ 25 ಮಂದಿ ಕಾಂಗ್ರೆಸ್ ಸಂಸದರನ್ನು 5 ದಿನಗಳ ಕಾಲ ಅಮಾನತುಗೊಳಿಸಿದ್ದರು. ಇದರಿಂದ ಕೆರಳಿದ ಕಾಂಗ್ರೆಸ್ ನಾಯಕರು ಸಂಸತ್ತಿನ ಹೊರಗೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ಸಭಾಧ್ಯಕ್ಷರ ಈ ಕ್ರಮ ಪ್ರಜಾಪ್ರಭುತ್ವದ ಕಗ್ಗೊಲೆ ಎಂದು ಸೋನಿಯಾ ಗಾಂಧಿ ಆಪಾದಿಸಿದ್ದರು.

ನಿನ್ನೆ ಸದನ ಸೇರಿದಾಗ ಕಾಂಗ್ರೆಸ್ ಲಲಿತ್ ಮೋದಿ ವಿವಾದಕ್ಕೆ ಸಂಬಂಧಿಸಿದಂತೆ ಚರ್ಚೆಗೆ ನಿಲುವಳಿ ಮಂಡಿಸಿತ್ತು. ಇದಕ್ಕೆ ಸುಷ್ಮಾ ಸ್ವ ರಾಜ್ ಒಪ್ಪಿಕೊಂಡರು. ಆದರೆ ಸರಿಯಾದ ಚರ್ಚೆ ನಡೆಯದೆ ಸುಷ್ಮಾ ಸ್ವರಾಜ್ ಮತ್ತು ಕಾಂಗ್ರೆಸ್ ಸಂಸದರ ಮಧ್ಯೆ ವಾಗ್ದಾಳಿ ನಡೆದವು.

ಪ್ರತಿಪಕ್ಷದ ಆರೋಪಕ್ಕೆ ತಿರುಗೇಟು ನೀಡಿದ ಸಚಿವೆ ಸುಷ್ಮಾ ಸ್ವರಾಜ್ ಕಾಂಗ್ರೆಸ್ ಸರ್ಕಾರದ ಆಡಳಿತ ಸಂದರ್ಭದಲ್ಲಿ ಕೇಳಿಬಂದ ಹಗರಣಗಳ ಬಗ್ಗೆ ಪ್ರಸ್ತಾಪಿಸಿದರು. ಸುಷ್ಮಾ ಸ್ವರಾಜ್ ಅವರು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು.
 ಆದರೆ ಮುಂಗಾರು ಅಧಿವೇಶನದಲ್ಲಿ ಯಾವುದೇ ಮಹತ್ವದ ವಿಷಯಗಳು ಚರ್ಚೆಯಾಗದಿರುವುದು, ವಿಧೇಯಕಗಳು ಅಂಗೀಕಾರವಾಗದಿರುವುದು ಸರ್ಕಾರಕ್ಕೆ ಹಿನ್ನೆಡೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com