
ಬೆಂಗಳೂರು: ಲೋಕಾಯುಕ್ತ ತಿದ್ದುಪಡಿ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ನೀಡಿದ್ದು ಸೋಮವಾರ ಸರ್ಕಾರ ರಾಜ್ಯಪತ್ರ ಹೊರಡಿಸಲಿದೆ.
ಹಾಲಿ ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ಅವರು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಹಿನ್ನೆಲೆಯಲಿ ಅವರ ಪದಚ್ಯುತಿಗಾಗಿ ಸಾರ್ವಜನಿಕರಿಂದ ತೀವ್ರ ಒತ್ತಡ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಪದಚ್ಯುತಿಗೆ ಇದ್ದ ಕಾನೂನು ತೊಡಕು ನಿವಾರಣೆ ಮಾಡುವುದಕ್ಕಾಗಿ ಸರ್ಕಾರ ಕಳೆದ ಅಧಿವೇಶನ ಸಂದರ್ಭದಲ್ಲಿ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿತ್ತು.
ಇದಕ್ಕೆ ಈಗ ರಾಜ್ಯಪಾಲರ ಅಂಕಿತ ಲಭಿಸಿದ್ದು ಸೋಮವಾರ ರಾಜ್ಯಪತ್ರ ಹೊರಡಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ ಹೇಳಿದ್ದಾರೆ. ಸರ್ಕಾರ ರಾಜ್ಯಪತ್ರ ಹೊರಡಿಸುತ್ತಿದ್ದಂತೆ ವಿಧೇಯಕಕ್ಕೆ ಕಾಯ್ದೆ ಮಾನ್ಯತೆ ಲಭ್ಯವಾಗುತ್ತದೆ. ಅದಾದ ಬಳಿಕ ಲೋಕಾಯುಕ್ತರ ಪದಚ್ಯುತಿಗೆ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕೆಂಬ ಅವಶ್ಯಕತೆ ಇಲ್ಲ. ವಿಧಾನಮಂಡಲದ ಉಭಯ ಸದನಗಳ ಸದಸ್ಯರ ಒಟ್ಟು ಬಲದ ಮೂರನೇ ಒಂದರಷ್ಟು ಸದಸ್ಯರು ಪದಚ್ಯುತಿ ನಿರ್ಣಯಕ್ಕೆ ಸಹಿ ಹಾಕಿ ಸ್ಪೀಕರ್ ಗೆ ನಿರ್ಣಯ ಸಲ್ಲಿಸುತ್ತಿದ್ದಂತೆ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
ಸ್ಪೀಕರ್ ಈ ನಿರ್ಣಯವನ್ನು ಒಪ್ಪಿದ ತಕ್ಷಣ ಹೊಸ ತಿದ್ದುಪಡಿ ಪ್ರಕಾರ ಲೋಕಾಯುಕ್ತರ ಎಲ್ಲಾ ಅಧಿಕಾರವೂ ನಿಯಂತ್ರಿಸಲ್ಪಡುತ್ತದೆ. ವಿಚಾರಣೆ ಪೂರ್ಣಗೊಳ್ಳುವವರೆಗೂ ಅವರಿಗೆ ಯಾವುದೇ ಅಧಿಕಾರ ಇರುವುದಿಲ್ಲ. ಹೀಗಾಗಿ ಸೋಮವಾರದ ನಂತರ ಪ್ರತಿಪಕ್ಷ ಸದಸ್ಯರು ತೆಗೆದುಕೊಳ್ಳುವ ನಿರ್ಣಯದ ಮೇಲೆ ಎಲ್ಲರ ಕಣ್ಣು ನೆಟ್ಟಿದೆ.
ಆದರೆ ಇದೇ ಅಧಿವೇಶನ ಸಂದರ್ಭದಲ್ಲಿ ಅಂಗೀಕಾರವಾದ ಮೋಟಾರು ವಾಹನ ಕಾಯ್ದೆಗೆ ರಾಜ್ಯಪಾಲರ ಒಪ್ಪಿಗೆ ದೊರೆತಿದ್ದರೂ, ಕೇಂದ್ರದ ಕಾಯ್ದೆ ಜತೆ ತಾಕಲಾಟ ಇರುವುದರಿಂದ ರಾಷ್ಟ್ರಪತಿಗಳ ಪರಿಶೀಲನೆಗೆ ಶಿಫಾರಸು ಮಾಡಲಾಗಿದೆ.
Advertisement