
ಅಬು ದಾಬಿ: ತಮ್ಮ ಅರಬ್ ದೇಶಗಳ ಪ್ರವಾಸದ ಬಗ್ಗೆ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಭಾರತದ ಆರ್ಥಿಕತೆ, ಇಂಧನ ಮತ್ತು ರಕ್ಷಣಾ ಹಿತಾಸಕ್ತಿಗಳಿಗೆ, ವ್ಯಾಪಾರ ವೃದ್ಧಿ ಮತ್ತು ಭಯೋತ್ಪಾದನೆ ನಿಗ್ರಹಕ್ಕೆ ಗಲ್ಫ್ ರಾಷ್ಟ್ರಗಳು ಮುಖ್ಯವಾಗಿವೆ, ಅದೊಂದು ಮಿನಿ ಭಾರತ ಎಂದು ಹೇಳಿದ್ದಾರೆ.
ಶಾರ್ಜಾ ಮೂಲದ ಪತ್ರಿಕೆಯಾದ ಖಲೀಜ್ ಟೈಮ್ಸ್ ಗೆ ಇಂದು ನೀಡಿದ ಸಂದರ್ಶನದಲ್ಲಿ , ಭಾರತ ಮತ್ತು ಅರಬ್ ರಾಷ್ಟ್ರಗಳು ಭಯೋತ್ಪಾದನೆ ಮತ್ತು ಉಗ್ರವಾದ ವಿಷಯಗಳಲ್ಲಿ ಸಾಮಾನ್ಯ ರಕ್ಷಣೆ ಮತ್ತು ಕ್ರಿಯಾಶೀಲ ಕಾರ್ಯತಂತ್ರಗಳನ್ನು ಹೊಂದಿವೆ. ಅಲ್ಲದೆ ಆರ್ಥಿಕತೆ, ಇಂಧನ ವಿಷಯಗಳಲ್ಲಿ ಕೂಡ ಎರಡೂ ದೇಶಗಳು ಪರಸ್ಪರ ಸಹಕಾರವನ್ನು ಆಶಿಸಬಹುದಾಗಿದೆ ಎಂದರು.
34 ವರ್ಷಗಳ ನಂತರ ನಮ್ಮ ದೇಶದ ಪ್ರಧಾನಿಯೊಬ್ಬರು ಅರಬ್ ರಾಷ್ಟ್ರಗಳಿಗೆ ನೀಡುವ ಭೇಟಿ ಇದಾಗಿದ್ದು, ಮುಸ್ಲಿಂ ದೇಶಕ್ಕೆ ಮೋದಿಯವರ ಮೊದಲ ಪ್ರವಾಸ ಇದಾಗಿದೆ. ಎರಡೂ ದೇಶಗಳ ಮಧ್ಯೆ ನಿಜವಾದ ಸವಿಸ್ತಾರ ಕಾರ್ಯತಾಂತ್ರಿಕ ಸಹಭಾಗಿತ್ವವನ್ನು ತಮ್ಮ ಪ್ರವಾಸದಲ್ಲಿ ಇದಿರು ನೋಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.
ಎರಡೂ ದೇಶಗಳ ಬಾಂಧವ್ಯ ವೃದ್ಧಿಯಿಂದ ಅರಬ್ ರಾಷ್ಟ್ರಗಳ ಭಾರತೀಯರಿಗೂ ಸಹಾಯವಾಗಲಿದೆ. ಪ್ರಸ್ತುತ ಅಲ್ಲಿ ಸುಮಾರು 2.6 ದಶಲಕ್ಷ ಭಾರತೀಯರಿದ್ದು, ಒಟ್ಟು ಜನಸಂಖ್ಯೆಯ ಶೇಕಡಾ 30ರಷ್ಟಿದ್ದಾರೆ. ಅದೊಂದು 'ಮಿನಿ ಭಾರತ' ಎಂದು ಬಣ್ಣಿಸಿದ್ದಾರೆ.
ಅವರು ಇಂದು ಸಂಜೆ ಅಬು ದಾಬಿಯ ಖ್ಯಾತ ಶೇಖ್ ಜಯೇದ್ ಮಸೀದಿಗೆ ಭೇಟಿ ನೀಡಲಿದ್ದಾರೆ.
Advertisement