ನಟ ಪ್ರಕಾಶ್ ರೈಗೆ 'ಟೆನ್ಷನ್' ತಂದ ಜ್ಯುವೆಲ್ಲರಿ ಜಾಹೀರಾತು

ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅವಮಾನ ಮಾಡುವ ಮತ್ತು ಅವರ ವರ್ಚಸ್ಸಿಗೆ ಧಕ್ಕೆ ತರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ...
ನಟ ಪ್ರಕಾಶ್ ರೈ ನಟಿಸಿರುವ ಜಾಹೀರಾತಿನ ಫಲಕ
ನಟ ಪ್ರಕಾಶ್ ರೈ ನಟಿಸಿರುವ ಜಾಹೀರಾತಿನ ಫಲಕ

ಚೆನ್ನೈ: ಮದುವೆ ವಯಸ್ಸಿಗೆ ಬಂದ ಯುವತಿಯರನ್ನು ಮತ್ತು ಹೆಣ್ಣು ಮಕ್ಕಳನ್ನು ಅವಮಾನ ಮಾಡುವ ಮತ್ತು ಅವರ ವರ್ಚಸ್ಸಿಗೆ ಧಕ್ಕೆ ತರುವ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದಕ್ಕೆ ಜನಪ್ರಿಯ ನಟ ಪ್ರಕಾಶ್ ರೈ ವಿರುದ್ಧ ಮದ್ರಾಸ್ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ನ್ಯಾಯಾಧೀಶರಾದ ಟಿ.ಎಸ್.ಸಿವಗ್ನಾನಮ್ ಮತ್ತು ಜಿ. ಚೋಕಲಿಂಗಂ ಅವರಿದ್ದ ವಿಭಾಗೀಯ ಪೀಠ, ನ್ಯಾಯಾಲಯದ ಅಧಿಕಾರಿಗಳಿಗೆ ಅರ್ಜಿದಾರ ವಿಲ್ಲಿವಕ್ಕಮ್ ನಿವಾಸಿಯಾದ ಎಸ್.ಸಫಿಯತ್ ಗೆ  ಅರ್ಜಿ ಸಂಖ್ಯೆ ನೀಡಲು ಸಹಾಯ ಮಾಡುವಂತೆ ಆದೇಶ ನೀಡಿದ್ದಾರೆ.

ಜಾಹೀರಾತು ಫಲಕಗಳಲ್ಲಿ ಹಾಕಿರುವ ಜಾಹೀರಾತನ್ನು ತೆಗೆದುಹಾಕುವಂತೆ ಅರ್ಜಿದಾರರು ಚೆನ್ನೈ ಪೊಲೀಸ್ ಆಯುಕ್ತರನ್ನು ಕೋರಿದ್ದು, ಪ್ರಕಾಶ್ ರೈ ಅವರು ನಟಿಸಿರುವ ಜಾಹೀರಾತನ್ನು ಎಲ್ಲಾ ಚಾನೆಲ್ ಗಳಿಂದಲೂ ತೆಗೆದುಹಾಕುವಂತೆ ಕೋರಿದ್ದಾರೆ. ಜಾಹೀರಾತಿನಲ್ಲಿ ಹೆಣ್ಣುಮಕ್ಕಳಿಗೆ ಗೌರವ ನೀಡದೆ ಒತ್ತಡ ಕೊಡುವವರು ಎಂಬಂತೆ ಬಿಂಬಿಸಲಾಗಿದೆ ಎಂಬುದೇ ದೂರಿಗೆ ಕಾರಣ.

ಈ ಜಾಹೀರಾತನ್ನು ಮುದ್ರಣ ಮತ್ತು ಟಿವಿ ಮಾಧ್ಯಮಗಳಿಂದ ತಕ್ಷಣವೇ ತೆಗೆದುಹಾಕಬೇಕೆಂದು ಒತ್ತಾಯಿಸಿರುವ ದೂರುದಾರರು ಪ್ರಕಾಶ್ ರೈ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದ್ದಾರೆ. ಅರ್ಜಿಯ ವಿಚಾರಣೆ ಸೋಮವಾರ ನಡೆಯಲಿದೆ.

ಪ್ರಕಾಶ್ ರೈಯವರು ಜ್ಯುವೆಲ್ಲರಿ ಜಾಹೀರಾತೊಂದರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ '' ನಿಮ್ಮ ಮಗಳ ಮದುವೆಗೆ ಅವಳ ಆಯ್ಕೆಯ ಬಂಗಾರವನ್ನು ಕಡಿಮೆ ಮಾರುಕಟ್ಟೆ ದರದಲ್ಲಿ ಪಡೆಯುವುದು ಗೊಂದಲವನ್ನುಂಟುಮಾಡಬಹುದು, ನಿಮ್ಮ ಗೊಂದಲಕ್ಕೆ ನಾವು ಜಾಗೃತೆ ತೆಗೆದುಕೊಳ್ಳುತ್ತೇವೆ. ಇದರಿಂದ ನೀವು ನಿಮ್ಮ ಮಗಳ ಮುತುವರ್ಜಿ ವಹಿಸಬಹುದು ಎಂಬುದಾಗಿ ಜಾಹೀರಾತಿನ ಸಾಲುಗಳು ಬರುತ್ತದೆ.

ಪ್ರಕಾಶ್ ರೈ ಸ್ಪಷ್ಟೀಕರಣ: ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ಅರಿತಾಗ ಸ್ಪಷ್ಟೀಕರಣ ನೀಡಿರುವ ಪ್ರಕಾಶ್ ರಾಜ್, ಇದು ಕೇವಲ ಜ್ಯುವೆಲ್ಲರಿ ಜಾಹೀರಾತಿಗೆ ಸಂಬಂಧಪಟ್ಟದ್ದು. ಹೆಣ್ಣು ಮಕ್ಕಳ ಮನಸ್ಸಿಗೆ ನೋವುಂಟು ಮಾಡಲು ಅಥವಾ ಅವರನ್ನು ಅವಮಾನ ಮಾಡುವ ಉದ್ದೇಶ ಇದರಲ್ಲಿಲ್ಲ ಎಂದು ಹೇಳಿದ್ದಾರೆ.

ಸಾಮಾನ್ಯವಾಗಿ ಜನರಿಗೆ ಹೆಣ್ಣು ಮಕ್ಕಳೆಂದರೆ ಕಷ್ಟ ಎಂಬ ಭಾವನೆಯಿರುತ್ತದೆ. ಅವರು ಮದುವೆ ವಯಸ್ಸಿಗೆ ಬಂದಾಗ ಇನ್ನೂ ಹೆಚ್ಚಾಗುತ್ತದೆ. ಮಳಿಗೆಯ ಜ್ಯುವೆಲ್ಲರಿ ಬೆಲೆಯನ್ನು ತೋರಿಸಲು, ಚಿನ್ನವನ್ನು ಖರೀದಿಸಲು ಪ್ರೋತ್ಸಾಹಿಸಲು ಮಾತ್ರ ಆ ವಾಕ್ಯವನ್ನು ಬಳಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ನನ್ನನ್ನು ಪ್ರಶ್ನಿಸಿದವರನ್ನು ನಾನು ಗೌರವಿಸುತ್ತೇನೆ. ಉದ್ದೇಶಪೂರ್ವಕವಾಗಿ ಅಲ್ಲ ಎಂದು ವಿವಾದಕ್ಕೆ ತೆರೆ ಎಳೆಯಲು ಪ್ರಯತ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com