ಎನ್ಎಸ್ಎ ಮಾತುಕತೆ: ಕಾಶ್ಮೀರಿ ಪ್ರತ್ಯೇಕತವಾದಿಗಳಿಗೆ ಪಾಕಿಸ್ತಾನದ ಆಹ್ವಾನ!
ನವದೆಹಲಿ: ಭಾರತ- ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೂ ಮುನ್ನ ಉಭಯ ದೇಶಗಳ ಸಂಬಂಧ ಮತ್ತಷ್ಟು ಹದಗೆಡುವ ಬೆಳವಣಿಗೆಗೆ ಪಾಕಿಸ್ತಾನ ಕಾರಣವಾಗಿದೆ.
ಎನ್ಎಸ್ಎ ಅಜಿತ್ ದೋವಲ್ ಜತೆ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಆ.23 ರಂದು ಪಾಕಿಸ್ತಾನದ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಭಾರತಕ್ಕೆ ಆಗಮಿಸುತ್ತಿದ್ದಾರೆ. ಇದೇ ವೇಳೆ ಭಾರತದಲ್ಲಿರುವ ಪಾಕಿಸ್ತಾನ ಹೈಕಮಿಷನರ್ ಅಬ್ದುಲ್ ಬಸಿತ್ ಸರ್ತಾಜ್ ಅಜೀಜ್ ರನ್ನು ಭೇಟಿ ಮಾಡಲು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಆಹ್ವಾನ ಕಳಿಸಿದ್ದಾರೆ.
ಕಾಶ್ಮೀರ ಪ್ರತ್ಯೇಕತಾವಾದಿ ನಾಯಕ ಸಯೀದ್ ಅಲಿ ಷಾ ಗಿಲಾನಿ, ಮಿರ್ವೈಜ್ ಉಮರ್ ಫಾರೂಕ್, ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದ್ದು, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಾಜ್ ಅಜೀಜ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಲಾಗಿದೆ.
ಕಳೆದ ವರ್ಷವೂ ಪಾಕಿಸ್ತಾನ ಹೈ ಕಮಿಷನರ್ ಬದುಲ್ ಬಸಿತ್ ಇದೇ ರೀತಿಯಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಸಭೆ ನಡೆಸಿದ್ದರ ಪರಿಣಾಮ ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ನಡೆಯಬೇಕಿದ್ದ ಕಾರ್ಯದರ್ಶಿಗಳ ಮಟ್ಟದ ಮಾತುಕತೆಯನ್ನು ರದ್ದುಗೊಳಿಸಿ ಪಾಕ್ ಕ್ರಮವನ್ನು ಪ್ರತಿಭಟಿಸಿತ್ತು. ಈಗ ರಾಷ್ಟ್ರೀಯ ಭದ್ರತಾ ಸಲಹೆಗಾರರ ಮಾತುಕತೆಗೂ ಮುನ್ನ ಪಾಕಿಸ್ತಾನ ತನ್ನ ಹಳೆಯ ಚಾಳಿಯನ್ನೇ ಮುಂದುವರೆಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ