ಕಾಂಗ್ರೆಸ್ ಸೂಟುಬೂಟುಗಿಂತ ಜುಬ್ಬಾ ಪೈಜಾಮಾಗಳನ್ನು ಬೆಂಬಲಿಸುತ್ತದೆ: ರಾಹುಲ್

ಮುಂಗಾರು ಅಧಿವೇಶನದ ಬಳಿಕ ಇದೀಗ ಮತ್ತೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷ ಚಪ್ಪಲಿ, ಶರ್ಟ್ ಹಾಗೂ ಜುಬ್ಬಾ ಪೈಜಾಮಾ ಹಾಕಿಕೊಳ್ಳುವವರ ಬಗ್ಗೆ ಕಾಳಜಿ ವಹಿಸುತ್ತದೆಯೇ ಹೊರತು ಸೂಟುಬೂಟು ಹಾಕಿಕೊಳ್ಳುವವರಿಗಲ್ಲ...
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ಅಮೇಥಿ: ಮುಂಗಾರು ಅಧಿವೇಶನದ ಬಳಿಕ ಇದೀಗ ಮತ್ತೆ ಮೋದಿ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು, ಕಾಂಗ್ರೆಸ್ ಪಕ್ಷ ಚಪ್ಪಲಿ, ಶರ್ಟ್ ಹಾಗೂ ಜುಬ್ಬಾ ಪೈಜಾಮಾ ಹಾಕಿಕೊಳ್ಳುವವರ ಬಗ್ಗೆ ಕಾಳಜಿ ವಹಿಸುತ್ತದೆಯೇ ಹೊರತು ಸೂಟುಬೂಟು ಹಾಕಿಕೊಳ್ಳುವವರಿಗಲ್ಲ ಎಂದು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಅಮೇಥಿಗೆ ಭೇಟಿ ನೀಡಿ ಮಾತನಾಡಿರುವ ಅವರು, ಅಧಿಕಾರಕ್ಕೆ ಬರುವಾಗ ಮೋದಿ ಅವರು ಅನೇಕ ಭರವಸೆಗಳನ್ನು ಜನತೆಗೆ ನೀಡಿದ್ದರು. ನಿವೃತ್ತ ಯೋಧರಿಗೆ ಸಮಾನ ವೇತನ ಮತ್ತು ಸಮಾನ ಪಿಂಚಣಿ, ರೈತರಿಗೆ ಸಹಾಯ ಹಾಗೂ ಕಪ್ಪು ಹಣ ಭಾರತಕ್ಕೆ ತರುವ ಭರವಸೆಗಳನ್ನು ಮೋದಿ ಅವರು ನೀಡಿದ್ದರು. ಆದರೆ, ಇದಾವುದೇ ಭರವಸೆಗಳು ಈ ವರೆಗೂ ಈಡೇರಿಲ್ಲ. ಕಪ್ಪು ಹಣದ ಬಗ್ಗೆ ಹೇಳುತ್ತಿದ್ದ ಮೋದಿ ಮೋದಿ ಅವರಿಗೆ ಲಲಿತ್ ಮೋದಿ ಪ್ರಕರಣ ಸಂಬಂಧ ನಾವು ಧ್ವನಿ ಎತ್ತಿದ ಕೂಡಲೇ ಅವರು ಕಪ್ಪು ಹಣದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿಬಿಟ್ಟರು ಎಂದು ಹೇಳಿದ್ದಾರೆ.

ಯಾವುದೇ ಭಾಷಣದಲ್ಲಿ ಮಾತನಾಡುವಾಗಲೂ ಮೋದಿ ಅವರು ಭಾರತ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಹೇಳುತ್ತಾರೆ. ಆದರೆ, ಈ ಹೇಳಿಕೆಯನ್ನು ಯಾವ ಭಾರತದ ಕುರಿತಂತೆ ನೀಡುತ್ತಾರೆ ಎಂಬುದು ನನಗೆ ಅರ್ಥವಾಗಿಲ್ಲ. ಮಧ್ಯಪ್ರದೇಶದ ವ್ಯಾಪಂ ಹಗರಣ, ಮಹಾರಾಷ್ಟ್ರದಲ್ಲಿ ಚಿಕ್ಕಿ ಹಗರಣ, ಲಲಿತ್ ಮೋದಿ ಪ್ರಕರಣ ಇವೆಲ್ಲವೂ ಭ್ರಷ್ಟಾಚಾರ ಪ್ರಕರಣಗಳೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ನಮ್ಮ ಪ್ರಧಾನಿ ಮಾತ್ರ ಭಾರತ ಭ್ರಷ್ಟಾಚಾರದಿಂದ ಮುಕ್ತವಾಗಿದೆ ಎಂದು ಹೇಳುತ್ತಿದ್ದಾರೆ.

ಮೋದಿ ಅವರು ಒಂದರಿಂದ ಪಾರಾಗುವ ಸಲುವಾಗಿ ಮತ್ತೊಂದು ಭರವಸೆಯನ್ನು ನೀಡುತ್ತಲೇ ಬಂದಿದ್ದಾರೆ. ಇದು ನಮ್ಮ ಪಕ್ಷಕ್ಕೆ ಅಥವಾ ನಮಗೆ ಪ್ರಯೋಜನವೇ ಆಗಬಹುದು. ಆದರೆ, ಇದು ದೇಶಕ್ಕೆ ನಷ್ಟವಾಗಲಿದೆ. ಪ್ರಧಾನಮಂತ್ರಿ ಹೇಳಿಕೆ ನೀಡುವಾಗ ಪ್ರತಿಯೊಂದು ಹೇಳಿಕೆಯೂ ತೂಕವಿರಬೇಕು, ಪ್ರಮುಖವಾದದ್ದು ಎಂದೆನಿಸಬೇಕು. ಆದರೆ, ನಮ್ಮ ಪ್ರಧಾನಿ ಅವರ ಮಾತುಗಳು ತೂಕವೇ ಇಲ್ಲದಿರುವುದು ಬೇಸರ ಸಂಗತಿ. ಬಿಹಾರಕ್ಕೆ 1.5 ಲಕ್ಷ ಕೋಟಿ ಪ್ಯಾಕೇಜ್ ನ್ನು ಮೋದಿ ಅವರು ಘೋಷಿಸಿದ್ದಾರೆ. ಆದರೆ ದೇಶಕ್ಕಾಗಿ ಹೋರಾಡಿದ ನಮ್ಮ ನಿವೃತ್ತ ಯೋಧರು ಹಲವು ವರ್ಷಗಳಿಂದಲೂ ಸಮಾನ ವೇತನ ಮತ್ತು ಸಮಾನ ಪಿಂಚಣಿಗಾಗಿ ಹೋರಾಟ ನಡೆಸುತ್ತಿರುವ ಮೋದಿ ಅವರ ಕಣ್ಣಿಗೆ ಕಾಣಿಸುತ್ತಿಲ್ಲ. ಮೋದಿ ಅವರಿಗೆ ಸಮಸ್ಯೆಗಳನ್ನು ಆಲಿಸುವುದಕ್ಕೆ ಸಮಯವಿಲ್ಲ. ಭಾಷಣ ಮಾಡುವುದಷ್ಟೇ ಅವರಿಗೆ ಪ್ರಮುಖವಾದದ್ದು ಎಂದು ಹೇಳಿದ್ದಾರೆ.

ಇದೇ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಕುರಿತಂತೆ ವ್ಯಂಗ್ಯವಾಡಿದ ರಾಹುಲ್, ದೇಶದ ಅರ್ಥಿಕಾಭಿವೃದ್ಧಿ ನಿಧಾನಗತಿಯಲ್ಲಿದೆ ಎಂಬುದನ್ನು ತೋರಿಸುವುದು ನಮ್ಮ ಸರ್ಕಾರಕ್ಕೆ ಇಷ್ಟವಿಲ್ಲ. ಭಾರತದಲ್ಲಿ ಅರ್ಥಿಕಾಭಿವೃದ್ಧಿ ಹೆಚ್ಚಿಸುವ ಸಲುವಾಗಿ ನಮ್ಮ ಸರ್ಕಾರ ಜಿಡಿಪಿಯನ್ನು ಅಳೆಯುವುದನ್ನೇ ಬದಲಾಯಿಸಿಬಿಟ್ಟಿದೆ. ವ್ಯವಸ್ಥೆ ಬದಲಾಯಿಸಿ ಅರ್ಥಿಕಾಭಿವೃದ್ಧಿಯನ್ನು ಪ್ರದರ್ಶಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಅಭಿವೃದ್ಧಿ ಹೆಸರಲ್ಲಿ ಎನ್ ಡಿಎ ಸರ್ಕಾರ ಹಾಸ್ಯವನ್ನು ಸೃಷ್ಟಿಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com