
ಪುಣೆ: ಪ್ರತಿಷ್ಠಿತ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯಾ ಕ್ಯಾಂಪಸ್‌ನಲ್ಲಿ ನಿನ್ನೆ ಮಧ್ಯರಾತ್ರಿ ಭಾರಿ ಹೈಡ್ರಾಮಾ ನಡೆದಿದ್ದು, ದಂಗೆ ಹಾಗೂ ಆಸ್ತಿ ಹಾನಿ ಆರೋಪದ ಮೇಲೆ ಪ್ರತಿಭಟನಾನಿರತ ಐವರು ವಿದ್ಯಾರ್ಥಿಗಳನ್ನು ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.
ಕಳೆದ ಸೋಮವಾರ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ತಂಡವೊಂದು ಎಫ್‌ಟಿಐಐ ನಿರ್ದೇಶಕ ಪ್ರಶಾಂತ್ ಪತ್ರಬೆ ಮತ್ತು ಇತರ ಸಿಬ್ಬಂದಿಯನ್ನು ಸುಮಾರು 8 ಗಂಟೆಗಳ ಕಾಲ ಅವರ ಕಚೇರಿಯಲ್ಲಿ ಕೂಡಿಹಾಕಿ, ಕಚೇರಿಯ ಪಿಠೋಪಕರಣಗಳನ್ನು ಧ್ವಂಸಗೊಳಿಸಿದ ಘಟನೆಯ ಬೆನ್ನಲ್ಲೆ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಈ ಘಟನೆಯ ನಂತರ ಪತ್ರಬೆ ಅವರು ನಿನ್ನೆ ವಿದ್ಯಾರ್ಥಿಗಳ ವಿರುದ್ಧ ಡೆಕ್ಕನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಗಿನ ಜಾವ 1.15ರ ಸುಮಾರಿಗೆ ಎಫ್‌ಟಿಐಐ ಕ್ಯಾಂಪಸ್ ಪ್ರವೇಶಿಸಿದ ಪೊಲೀಸರು, ದಂಗೆ ಹಾಗೂ ಆಸ್ತಿ ಹಾನಿ ಮಾಡಿದ ಆರೋಪದ ಮೇಲೆ ಐವರು ವಿದ್ಯಾರ್ಥಿಗಳನ್ನು ಬಂಧಿಸಿ, ಡೆಕ್ಕನ್ ಜಿಮ್‌ಖಾನಾ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಪೊಲೀಸರ ಬಳಿ ಇದ್ದ ಪಟ್ಟಿಯಲ್ಲಿ ಇನ್ನೂ ಕೆಲವು ವಿದ್ಯಾರ್ಥಿಗಳ ಹೆಸರಿದ್ದು ಇದು ಮತ್ತಷ್ಟು ಗೊಂದಲಕ್ಕೆ ಕಾರಣವಾಗಿತ್ತು. ಉಳಿದ ಕೆಲವು ವಿದ್ಯಾರ್ಥಿಗಳು ಪೊಲೀಸರು ಕ್ಯಾಂಪಸ್ ಒಳಗೆ ಬಂದ ಸಂದರ್ಭದಲ್ಲಿ ಸ್ಥಳದಲ್ಲಿ ಇರಲಿಲ್ಲ ಎನ್ನಲಾಗಿದೆ.
ಎಫ್ ಐ ಆರ್‌ನಲ್ಲಿ ನಮೂದಾಗಿರುವ ಹದಿನೇಳು ವಿದ್ಯಾರ್ಥಿಗಳ ಪೈಕಿ ಮೂವರು ವಿದ್ಯಾರ್ಥಿನಿಯರ ಹೆಸರೂ ನಮೂದಾಗಿತ್ತು. ಆದರೆ ಅವರನ್ನು ಪೊಲೀಸರು ಬಂಧಿಸಲಿಲ್ಲ. ಎಫ್ಐಆರ್‌ನಲ್ಲಿ ಇತರ 30 ಆರೋಪಿಗಳನ್ನು ಹೆಸರಿಸಲಾಗಿದೆ.
ಈ ರೀತಿ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಲು ಕಾರಣವೇನು ಎಂದು ಕೇಳಲಾದ ಪ್ರಶ್ನೆಗೆ "ನಮಗೆ ವಿದ್ಯಾರ್ಥಿಗಳನ್ನು ಬಂಧಿಸಲು ಸೂಚನೆ ನೀಡಲಾಗಿತ್ತು' ಎಂದು ಪೊಲೀಸರು,ಉತ್ತರಿಸಿದ್ದಾರೆ.
ಎಫ್‌ಟಿಐಐ ಆಡಳಿತ ಮಂಡಳಿಯ ಅಧ್ಯಕ್ಷತೆಯಿಂದ ಟಿವಿ ನಟ ಗಜೇಂದ್ರ ಚೌಹಾಣ್ ಅವರನ್ನು ಹೊರಗಿರಿಸಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಕಳೆದ ಎರಡು ತಿಂಗಳಿಂದ ಚಳವಳಿ ನಡೆಸುತ್ತಿದ್ದಾರೆ.
Advertisement