
ನವದೆಹಲಿ: ಉತ್ತರ ಪ್ರದೇಶ ಬುಲಂದ್‍ಷಹರ್‍ನ ಕೇಸರ್ ಕಲಾನ್ ಗ್ರಾಮದ ಫೈಜುಲ್ ಹಸನ್ ಖಾದ್ರಿ ಮತ್ತು ಮೊಘಲ್ ಚಕ್ರವರ್ತಿ ಷಾ ಜಹಾನ್ ನಡುವೆ ಬಹಳಷ್ಟು ಸಾಮ್ಯತೆ ಇದೆ. ಷಾ ಜಹಾನ್ 350 ವರ್ಷಗಳ ಹಿಂದೆ ಪತ್ನಿ ಮಮ್ತಾಜ್ ಸ್ಮರಣಾರ್ಥ ತಾಜ್‍ಮಹಲ್ ಕಟ್ಟಿಸಿದ್ದರೆ, ಫೈಜುಲ್ ಹಸನ್ ಖಾದ್ರಿ ಪತ್ನಿ ತಾಜ್ಮುಲಿ ಬೇಗಂ ಸ್ಮರಣಾರ್ಥ ತಾಜ್‍ಮಹಲ್ ಕಟ್ಟಿಸುತ್ತಿದ್ದಾರೆ. ಬುಲಂದ್‍ಷಹರ್ ಸುತ್ತಮುತ್ತ ಲ ಆಕರ್ಷಣೆ ಕೇಂದ್ರವಾಗಿರುವ ಮಿನಿ ತಾಜ್‍ಮಹಲ್ ಪೂರ್ಣಗೊಂಡಿಲ್ಲ. ಏಕೆಂದರೆ ಫೈಜುಲ್ ಖಾದ್ರಿಗೆ ಕಾಸಿನ ತೊಂದರೆ ಎದುರಾಗಿದೆ ಎಂದು ``ಹಿಂದುಸ್ತಾನ್ ಟೈಮ್ಸ್ '' ಗುರುವಾರ ವರದಿ ಮಾಡಿದೆ. ಎಂಭತ್ತು ವರ್ಷ ವಯಸ್ಸಿನ ಖಾದ್ರಿ ಎಷ್ಟು ಸ್ವಾಭಿಮಾನಿ ಎಂದರೆ ಹಣಕಾಸಿನ ಸಹಾಯ ನೀಡಲು ಖುದ್ದು ಉ.ಪ್ರ ಸಿಎಂ ಅಖಿಲೇಶ್ ಯಾದವ್ ಮಾತ್ರವಲ್ಲ ಊರಿನ ಜನರು ಮುಂದಾದರೂ ನೆರವು ಪಡೆಯಲು ನಿರಾಕರಿಸಿದ್ದಾರೆ.
ಏನು ಪ್ರೇರಣೆ?: ನಿವೃತ್ತ ಪೋಸ್ಟ್ ಮಾಸ್ಟರ್ ಆಗಿರುವ ಖಾದ್ರಿ ತಾಜ್ಮುಲಿ ಜತೆ 58 ವರ್ಷ ದಾಂಪತ್ಯ ನಡೆಸಿದ್ದರು. 2011ರಲ್ಲಿ ಪತ್ನಿ ಗಂಟಲು ಕ್ಯಾನ್ಸರ್ ನಿಂದಸಾವನ್ನಪ್ಪಿದರು. ಅಷ್ಟು ವರ್ಷ ಬದುಕಿಗೆ ಹೆಗಲು ಕೊಟ್ಟಿದ್ದ ಸಂಗಾತಿಗೆ ಶಾಶ್ವತ ಸ್ಮಾರಕ ನಿರ್ಮಿಸಲು ನಿರ್ಧರಿಸಿ ದರು. ತಮ್ಮ ಬಳಿಯಿದ್ದ ತುಂಡು ಭೂಮಿ ಮಾರಿದರು. ಸೇವೆ ಯಲ್ಲಿದ್ದಾಗ ಗಳಿಸಿದ್ದೆಲ್ಲವನ್ನೂ ಸೇರಿಸಿ ಮಿನಿ ತಾಜ್‍ಮಹಲ್ ಕಟ್ಟಲು ಮುಂದಾದರು. ಇದುವರೆಗೆ ರು.11 ಲಕ್ಷ ವೆಚ್ಚ ಮಾಡಿದ್ದಾರೆ. ಕಟ್ಟಡ ಕಾಮಗಾರಿ ಪೂರ್ತಿಯಾಗಿದ್ದರೂ ಅಮೃತಶಿಲೆ ಹೊದಿಸುವ ಕೆಲಸ ಬಾಕಿ ಇದೆ. ಅದು
ದುಬಾರಿಯಾಗಿರುವುದರಿಂದ ಅದನ್ನು ನಿಭಾಯಿಸುವ ಸ್ಥಿತಿಯಲ್ಲಿ ಖಾದ್ರಿಯವರಿಲ್ಲ.ಖಾದ್ರಿ ಅವರಿಗೆ ಮತ್ತೊಂದು ಆಸೆ . ತಾವು ಮೃತಪಟ್ಟಾಗ ಪತ್ನಿಯ ಸಮಾಧಿ ಪಕ್ಕದಲ್ಲೇ ಸಮಾಧಿ ಮಾಡಬೇಕೆಂಬುದು. ಇದಕ್ಕಾಗಿ ಅವರಾಗಲೇ ವಕ್ಫ್ ಮಂಡಳಿಗೆ ಶುಲ್ಕ ಪಾವತಿಸಿದ್ದಾರೆ.
Advertisement