
ನವದೆಹಲಿ: ರಾಜಸ್ಥಾನದ ಸ್ಥಳೀಯ ನಗರಾಡಳಿತ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, ನಮ್ಮ ಗೆಲವು ಕಾಂಗ್ರೆಸ್ ಪಕ್ಷಕ್ಕೆ ಸತ್ಯದ ಅರಿವು ಮೂಡಿಸಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.
ರಾಜಸ್ಥಾನದ ಸ್ಥಳೀಯ ನಗರಾಡಳಿತ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವ ಕುರಿತಂತೆ ರಾಜಸ್ಥಾನ ಮುಖ್ಯಮಂತ್ರಿ ವಸುಂದರಾ ರಾಜೇ ಅವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿರುವ ಅವರು, ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಕ್ಷಕ್ಕೆ ಸತ್ಯದ ಅರಿವಾದಂತೆ. ಬಿಜೆಪಿಯ ಹೊಸ ಯೋಜನೆ ಹಾಗೂ ನೀತಿಗಳೇ ಈ ಗೆಲುವಿಗೆ ಕಾರಣವಾಗಿದೆ. ಅಭಿವೃದ್ಧಿಗೆ ವಿರೋಧವಾಗಿ ನಿಲ್ಲುವ ಹಾಗೂ ಋಣಾತ್ಮಕವಾಗಿ ರಾಜಕೀಯ ಮಾಡುವವರಿಗೆ, ಅಡಿಪಾಯವೇ ಇಲ್ಲದ ವಿಷಯ ತೆಗೆದುಕೊಂಡು ಆರೋಪ ಮಾಡುವವರಿಗೆ, ರಾಜಸ್ಥಾನ ಜನತೆ ತಕ್ಕ ಪಾಠ ಕಲಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ವಿರುದ್ಧ ಇದ್ದ ಋಣಾತ್ಮಕ ಪ್ರವೃತ್ತಿಯನ್ನು ರಾಜಸ್ತಾನ ಜನತೆ ಇದೀಗ ಹೊರಹಾಕಿರುವುದರ ಪರಿಣಾಮವೇ ಈ ಫಲಿತಾಂಶ. ಕಾಂಗ್ರೆಸ್ ಪಕ್ಷ ಅಭಿವೃದ್ಧಿ ಯೋಜನೆ ಹಾಗೂ ಆರ್ಥಿಕ ಕಾರ್ಯಕ್ರಮಗಳಿಗೆ ತಡೆಯೊಡ್ಡಿತ್ತು. ಇದೀಗ ಅದೇ ರೀತಿಯಲ್ಲಿಯೇ ಇಲ್ಲಿನ ಜನತೆ ಕಾಂಗ್ರೆಸ್ ಗೆ ಪಾಠ ಕಲಿಸಿದೆ. ಸಾರ್ವಜನಿಕ ನ್ಯಾಯಾಲಯ ಇದೀಗ ತೀರ್ಪು ನೀಡಿದ್ದು, ತನ್ನ ಮುದ್ರೆಯನ್ನು ಬಿಜೆಪಿಗೆ ಒತ್ತಿದೆ. ಈ ಚುನಾವಣೆ ಮೂಲಕ ಉತ್ತಮ ಆಡಳಿತ ನಡೆಸುವ ಪಕ್ಷಕ್ಕೆ ಮಾತ್ರ ಅಧಿಕಾರ ಮತ ನೀಡುವ ಸಾರವನ್ನು ಜನತೆ ಸಾರಿದೆ ಎಂದು ಹೇಳಿದ್ದಾರೆ.
ಆಗಸ್ಟ್ 17 ರಂದು ನಡೆದ 3,351 ಸ್ಥಳೀಯ ನಗರಾಡಳಿತ ಚುನಾವಣೆ ಫಲಿತಾಂಶ ಇಂದು ಹೊರಬಿದ್ದಿದ್ದು, ಇದರಲ್ಲಿ 1,443ರಲ್ಲಿ ಬಿಜೆಪಿ ಗೆಲವು ಸಾಧಿಸಿದ್ದರೆ, ಕಾಂಗ್ರೆಸ್ 1,164 ವಾರ್ಡ್‌ಗಳನ್ನು ತನ್ನ ತೆಕ್ಕೆಗೆ ಹಾಕಿ ಕೊಂಡಿದೆ.
Advertisement