
ನವದೆಹಲಿ: ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಅವರ ವೀಸಾ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿದೆ.
ವೀಸಾ ಅವಧಿಯನ್ನು ವಿಸ್ತರಣೆ ಮಾಡುವಂತೆ ಬಾಂಗ್ಲಾ ದೇಶದ ಲೇಖಕಿ ತಸ್ಲಿಮಾ ನಸ್ರೀನ್ ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದರು. ಗೃಹ ಸಚಿವ ರಾಜನಾಥ್ ಸಿಂಗ್ ವಿಸ್ತರಣೆಗೆ ಆದೇಶ ನೀಡಿದ್ದಾರೆ. ವೀಸಾ ಅವಧಿ ವಿಸ್ತರಣೆಗೊಂಡಿರುವ ಹಿನ್ನೆಲೆಯಲ್ಲಿ ತಸ್ಲಿಮಾ ನಸ್ರೀನ್ ಪ್ರತಿಕ್ರಿಯಿಸಿದ್ದು, ಒಂದು ವರ್ಷಕ್ಕೂ ಹೆಚ್ಚಿನ ಅವಧಿ ವಿಸ್ತರಣೆ ನಿರೀಕ್ಷಿಸಿದ್ದೆ, ಆದರೂ ಸಂತಸವಾಗಿದೆ ಎಂದು ತಿಳಿಸಿದ್ದಾರೆ.
ಬಾಂಗ್ಲಾದೇಶದಲ್ಲಿ ಮೂಲಭೂತವಾದಿಗಳಿಂದ ಬೆದರಿಕೆ ಎದುರಿಸುತ್ತಿದ್ದ ತಸ್ಲಿಮಾ ನಸ್ರೀನ್, 1994 ರಲ್ಲಿ ಗೌಪ್ಯವಾಗಿ ಭಾರತ ತೊರೆದಿದ್ದರು. ಮೂಲತಃ ಸ್ವೀಡನ್ ಪ್ರಜೆಯಾದ ನಸ್ರೀನ್, 2004 ರಿಂದ ನಿರಂತರವಾಗಿ ವೀಸಾ ಪಡೆಯುತ್ತಿದ್ದಾರೆ. ಕಳೆದ 2 ವರ್ಷಗಳಲ್ಲಿ ತಸ್ಲೀಮಾ ನಸ್ರೀನ್ ಯುಎಸ್ ಯುರೋಪ್ ಗಳಲ್ಲೂ ವಾಸವಾಗಿದ್ದರು. ಅವರು ಭಾರತದಲ್ಲೇ ಶಾಶ್ವತವಾಗಿರಲು ಇಚ್ಛಿಸುತ್ತಿರುವುದಾಗಿ ಹಲವು ಸಂದರ್ಭಗಳಲ್ಲಿ ಹೇಳಿದ್ದರು. ಭಾರತದಲ್ಲಿ ಇರಲು ಸಾಧ್ಯವಾಗದೇ ಇದ್ದರೆ ತನಗೆ ಗುರುತಿನ ಸಂದಿಗ್ಧತೆ ಕಾಡುತ್ತದೆ ಎಂದು ತಸ್ಲೀಮಾ ನಸ್ರೀನ್ ಹೇಳಿದ್ದಾರೆ.
Advertisement