ಬೆಲೆ ಏರಿಕೆ ತಡೆಗೆ ಈರುಳ್ಳಿ ಆಮದು

ದಿನೇ ದಿನೆ ಗಗನಮುಖಿಯಾಗುತ್ತಿರುವ ಈರುಳ್ಳಿ ದರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಜಾಗತಿಕ ಟೆಂಡರ್ ಮೂಲಕ ಹತ್ತು...
ಈರುಳ್ಳಿ
ಈರುಳ್ಳಿ

ನವದೆಹಲಿ: ದಿನೇ ದಿನೆ ಗಗನಮುಖಿಯಾಗುತ್ತಿರುವ ಈರುಳ್ಳಿ ದರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಸರ್ಕಾರ, ಜಾಗತಿಕ ಟೆಂಡರ್ ಮೂಲಕ ಹತ್ತು ಸಾವಿರ ಟನ್ ಈರುಳ್ಳಿ ಆಮದು ಮಾಡಿಕೊಳ್ಳಲು ಮುಂದಾಗಿದೆ. ಮಳೆ ವೈಪ್ಯರೀತ್ಯ ಮತ್ತು ಬರದ ಕಾರಣದಿಂದ ದೇಶದಲ್ಲಿ ಈರುಳ್ಳಿ ಉತ್ಪಾದನೆ ಕುಂಠಿತಗೊಂಡಿರುವ ಹಿನ್ನೆಲೆಯಲ್ಲಿ ಭಾರೀಪ್ರಮಾಣದ ಬೆಲೆ ಏರಿಕೆಯಾಗಿದ್ದು, ಸರ್ಕಾರ ಬೆಲೆ ಏರಿಕೆ ತಡೆಯಲು ಈ ಕ್ರಮಕ್ಕೆ ಮುಂದಾಗಿದೆ. ಆಮದಿಗಾಗಿ ಸರ್ಕಾರಿಸಂಸ್ಥೆ ಎಂಎಂಟಿಸಿ ಜಾಗತಿಕ ಟೆಂಡರ್ ಕರೆದಿದ್ದು, ಒಂದು ವೇಳೆ ಯಾವುದಾದರೂ ದೇಶ ಈ ಟೆಂಡರ್‍ಗೆ ಸಮ್ಮತಿ ಸೂಚಿಸಿದರೂದಾಸ್ತಾನು ಬರಲು ಕನಿಷ್ಠ ಒಂದು ತಿಂಗಳಾದರೂ ಬೇಕಾಗಲಿದೆ.ಹೀಗಾಗಿ ದರಗಳು ಕಡಿಮೆಯಾಗಲು ಕನಿಷ್ಠ ಒಂದೂವರೆ ತಿಂಗಳಾದರೂ ಕಾಯಲೇಬೇಕು.


ಏಷ್ಯಾದ ಅತಿದೊಡ್ಡ ಈರುಳ್ಳಿ ಮಾರುಕಟ್ಟೆಯಾದ ಮಹಾರಾಷ್ಟ್ರದ ಲಾಸಲ್ ಗಾಂನಲ್ಲಿ ಗುರುವಾರ ಪ್ರತಿ ಕ್ವಿಂಟಾಲ್ ದರ ರು.4,800 ಇದ್ದದು ಶುಕ್ರವಾರ ರು.5,400ಕ್ಕೆತಲುಪಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ದುಬಾರಿಯಾಗುವ ಅಂದಾಜಿದೆ ಎಂದು ಮಾರುಕಟ್ಟೆ ಮೂಲಗಳು ಹೇಳಿವೆ. ರಾಜ್ಯದಲ್ಲೂ ಶುಕ್ರವಾರ ಪ್ರತಿ ಕ್ವಿಂಟಾಲ್ ಸಗಟು ದರ ರು.6,000ಕ್ಕೆ ತಲುಪಿದೆ. ರಿಟೇಲ್ ಮಾರುಕಟ್ಟೆಯಲ್ಲಿ ಪ್ರತಿ ಕೆಜಿ ದರ ರು.65 ರಿಂದ ರು.70ವರೆಗೂ ಮಾರಾಟ ಮಾಡಲಾಗುತ್ತಿದೆ. ನವದೆಹಲಿಯಲ್ಲಂತೂ ಪ್ರತಿ ಕೆಜಿ ದರ  ರು.80 ಮುಟ್ಟಿದೆ. ಕಳೆದ ಮಾರ್ಚ್‍ನಲ್ಲಿ ಪ್ರಮುಖ ಈರುಳ್ಳಿ ಬೆಳೆವ ಪ್ರದೇಶಗಳಲ್ಲಿ ಆಲಿಕಲ್ಲು ಮಳೆ ಸುರಿದಿತ್ತು. ಇದರಿಂದ ಸಾಕಷ್ಟು ಬೆಳೆ ನಾಶವಾಗಿತ್ತು. ಈ ಕಾರಣದಿಂದ ಏಪ್ರಿಲ್ ನಂತರದಲ್ಲಿ ಮಾರುಕಟ್ಟೆಗೆ ಬರಬೇಕಾಗಿದ್ದ
ಸರಾಸರಿ ಉತ್ಪನ್ನದಲ್ಲಿ ಭಾರಿ ಇಳಿಮುಖ ಕಂಡಿತು. ಅಂದಿನಿಂದಲೂ ಈರುಳ್ಳಿ ದರನಿರಂತರವಾಗಿ ಏರುಮುಖದಲ್ಲಿದೆ.ಈ ತಿಂಗಳ ದ್ವಿತೀಯಾರ್ಧದಿಂದ ರಾಜ್ಯದಲ್ಲಿನ ಫಸಲು ಮಾರುಕಟ್ಟೆಗೆ ಬರಬೇಕಾಗಿತ್ತು. ಸದ್ಯ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಮತ್ತು ಚಳ್ಳಕೆರೆಯಿಂದ ಮಾತ್ರ ಬರುತ್ತಿದೆ. ಇತರ ಜಿಲ್ಲೆಗಳಿಂದ ಫಸಲು ಬರಬೇಕಾದರೆ ಇನ್ನೂ ಹದಿನೈದು ಇಪ್ಪತ್ತು ದಿನ ಬೇಕಾಗಲಿದೆ. ಇದೇ ಸಂದರ್ಭದಲ್ಲಿ ಆಂಧ್ರಪ್ರದೇಶದ ಕರ್ನೂಲ್ ಮತ್ತು ತಮಿಳುನಾಡಿನಿಂದ ಉತ್ಪನ್ನ ಬರಬೇಕಾಗಿತ್ತು. ಆದರೆ ಅನಿಯಮಿತ ಮಳೆಯಿಂದಾಗಿ ಈ ರಾಜ್ಯಗಳಲ್ಲಿನ ಫಸಲು ನಾಶವಾಗಿದೆ. ರಾಜ್ಯದಲ್ಲಿನ ಬೇಡಿಕೆ ಕಂಡುಕೊಂಡಿರುವ ಲಾಸಲ್‍ಗಾಂವ್‍ನ ವರ್ತಕರು ಈರುಳ್ಳಿಯನ್ನು ಇತ್ತ ರವಾನಿಸುತ್ತಿದ್ದಾರೆ. ಅಲ್ಲಿಂದ ಬರುತ್ತಿರುವ ಈರುಳ್ಳಿ ಗಾತ್ರದಲ್ಲಿ ತುಂಬಾ ಚಿಕ್ಕದಾಗಿದ್ದರೂ ಅನಿವಾರ್ಯವಾಗಿ ಖರೀದಿಸುವಂತಾಗಿದೆ. ರಾಜ್ಯದಲ್ಲಿನ ಬೆಳೆ ಮಾರುಕಟ್ಟೆಗೆ ಬರುವವರೆಗೂ ಈರುಳ್ಳಿ ದರ ಕಡಿಮೆಯಾಗುವ ಸಾಧ್ಯತೆಗಳೇ ಇಲ್ಲ ಎನ್ನುತ್ತಾರೆ ಆಲೂಗಡ್ಡೆ ಮತ್ತು ಈರುಳ್ಳಿ ವರ್ತಕರ ಸಂಘದ ಉಪಾಧ್ಯಕ್ಷ ಬಾಲಕೃಷ್ಣ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com