ಮ್ಯಾಗಿ ನಂತರ ಯಿಪ್ಪೀ ನೂಡಲ್ಸ್ ನಿಷೇಧ?

ಮ್ಯಾಗಿ ನಂತರ ಇದೀಗ ಯಿಪ್ಪೀ ನೂಡಲ್ಸ್ ಸರದಿ. ಯಿಪ್ಪೀ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶ ಆಹಾರ...
ಯಿಪ್ಪೀ  ನೂಡಲ್ಸ್
ಯಿಪ್ಪೀ ನೂಡಲ್ಸ್

ಆಲಿಘಡ: ಮ್ಯಾಗಿ ನಂತರ ಇದೀಗ ಐಟಿಸಿ ಕಂಪೆನಿಯ ಯಿಪ್ಪೀ ನೂಡಲ್ಸ್ ಸರದಿ. ಯಿಪ್ಪೀ ನೂಡಲ್ಸ್ ನಲ್ಲಿ ಸೀಸದ ಅಂಶ ಹೆಚ್ಚಾಗಿದೆ ಎಂದು ಉತ್ತರ ಪ್ರದೇಶ ಆಹಾರ ಮತ್ತು ಔಷಧ ಪ್ರಾಧಿಕಾರ ತಿಳಿಸಿದೆ.

ಆಲಿಘಡದ ಸ್ಥಳೀಯ ಮಾಲ್ ವೊಂದರಿಂದ ಯಿಪ್ಪೀ ನೂಡಲ್ಸ್ ನ ಮಾದರಿಯನ್ನು ತಂದು ಪರೀಕ್ಷೆ ಮಾಡಿ ನೋಡಿದಾಗ ಅದರಲ್ಲಿ ಸೀಸದ ಅಂಶ ಅನುಮತಿ ಮಟ್ಟಕ್ಕಿಂತ ಜಾಸ್ತಿಯಾಗಿರುವುದು ಕಂಡುಬಂತು ಎಂದು ಪ್ರಾಧಿಕಾರ ತಿಳಿಸಿದ್ದು, ಈ ಬಗ್ಗೆ ಕೂಡಲೇ ಐಟಿಸಿ ಕಂಪೆನಿ ವಿರುದ್ಧ ಕೇಸು ದಾಖಲಿಸಲಾಗುವುದು ಎಂದು ಹೇಳಿದೆ.

ನೂಡಲ್ಸ್ ನಲ್ಲಿ ಸೀಸದ ಅಂಶ 1 ಪಿಪಿಎಮ್(2 ಮಿಲಿ ಗ್ರಾಂ)ಗಿಂತ ಕಡಿಮೆ ಇರಬೇಕು.ಆದರೆ ಯಿಪ್ಪೀ ಯಲ್ಲಿ 1.057 ಪಿಪಿಎಂನಷ್ಟು ಸೀಸದ ಅಂಶವಿದೆ ಎಂದು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ತಿಳಿದುಬಂದಿದೆ ಎಂದು ಪ್ರಾಧಿಕಾರದ ಆಲಿಘಡ್ ವಿಭಾಗದ ಮುಖ್ಯಸ್ಥ ಚಂದನ್ ಪಾಂಡೆ ತಿಳಿಸಿದ್ದಾರೆ. ಕಳೆದ ಜೂನ್ 21ರಂದು ಆಹಾರ ಪ್ರಾಧಿಕಾರ ವಿವಿಧ ಆಹಾರ ಉತ್ಪನ್ನಗಳ 8 ಮಾದರಿಗಳನ್ನು ಲಕ್ನೋ ಮತ್ತು ಮೀರತ್ ಗೆ  ಪರೀಕ್ಷೆಗೆ ಕಳುಹಿಸಿಕೊಟ್ಟಿತ್ತು.

ಸೀಸದ ಅಂಶ ಹೆಚ್ಚಿರುವುದರಿಂದ ಮಕ್ಕಳ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರಯೋಗಾಲಯದ ವರದಿಯನ್ನು ಪ್ರಾಧಿಕಾರದ ಮುಖ್ಯ ಆಯುಕ್ತರಿಗೆ ಕಳುಹಿಸಿ ಕೊಡಲಾಗಿದ್ದು ಅವರಿಂದ ಅನುಮತಿ ಬಂದ ತಕ್ಷಣ ಕೇಸು ದಾಖಲಿಸಲಾಗುವುದು ಎಂದು ಪಾಂಡೆ ತಿಳಿಸಿದರು.

ಈ ಮೊದಲು ಮ್ಯಾಗಿ ನೂಡಲ್ಸ್ ನಲ್ಲಿ ಸಹ ಸೀಸದ ಪ್ರಮಾಣ ಅನುಮತಿ ಮಟ್ಟಕ್ಕಿಂತ ಜಾಸ್ತಿಯಾಗಿದೆ ಎಂಬ ಆರೋಪ ಉತ್ತರ ಪ್ರದೇಶದಲ್ಲಿಯೇ ಮೊದಲು ಆರಂಭವಾಗಿ ನಂತರ ದೇಶಾದ್ಯಂತ ಹಂತ ಹಂತವಾಗಿ ನಿಷೇಧ ಹೇರಿಕೆಗೊಂಡಿತ್ತು. ಆದರೆ ಮೊನ್ನೆ ಮುಂಬೈ ಹೈಕೋರ್ಟ್ ಮ್ಯಾಗಿ ವಿರುದ್ಧದ ನಿಷೇಧವನ್ನು ಹಿಂತೆಗೆದುಕೊಂಡು ಮರು ಪರೀಕ್ಷೆ ನಡೆಸುವಂತೆ ಕೋರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com