
ನವದೆಹಲಿ: ನಿಮಗೆ ಏಡ್ಸ್ ಇದೆಯೇ? ಇಲ್ಲದಿದ್ದರೆ ಮಾತ್ರ ಪ್ರವೇಶ, ಇದ್ದರೆ ನಿಮಗಿಲ್ಲ ತರಬೇತಿ ಅವಕಾಶ! ಬ್ಯಾಂಕಾಕ್‍ನಲ್ಲಿ ನಡೆಯಲಿರುವ ತರಬೇತಿ ಕಾರ್ಯಕ್ರಮಕ್ಕೆ ಹೋಗಲಿಚ್ಛಿಸುವ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ಹಾಕಿರುವ ಷರತ್ತು ಇದು.
ಎಚ್‍ಐವಿ ಮತ್ತಿತರ ಸೋಂಕುಗಳಿಂದ ಬಳಲುತ್ತಿರುವವರಿಗೆ ಬ್ಯಾಂಕಾಕ್‍ಗೆ ತೆರಳಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ತಿಳಿಸಿದೆ. ಹಾಗಾಗಿ, ಎಲ್ಲರೂ ತಮಗೆ ಏಡ್ಸ್ ಇಲ್ಲ ಎಂಬುದನ್ನು ಖಾತ್ರಿ ಪಡಿಸುವ ಮೆಡಿಕಲ್ ಸರ್ಟಿಫಿಕೇಟ್ ಒದಗಿಸುವಂತೆ ಸೂಚಿಸಲಾಗಿದೆ.
ಪ್ರಮಾಣಪತ್ರ ಕೊಡಿ: ಥಾಯ್ಲೆಂಡ್ ನ ಬ್ಯಾಂಕಾಕ್‍ನ ಕಾಸೆಟ್‍ಸಾರ್ಟ್ ವಿವಿಯಲ್ಲಿ ನ.2ರಿಂದ 30ರವರೆಗೆ ಫ್ರಮ್ ಸಫೀಷಿಯನ್ಸಿ ಎಕಾನಮಿ ಟು ವೆಲ್ದಿನೆಸ್ ಆಫ್ ದಿ ನೇಷನ್'' ಎಂಬ ವಿಷಯದ ತರಬೇತಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಸಚಿವಾಲಯವು ಉನ್ನತ ಹುದ್ದೆಯ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಿದೆ.
ಜತೆಗೆ, ಅರ್ಜಿ ಸಲ್ಲಿಸುವವರು ಚೆನ್ನಾಗಿ ಇಂಗ್ಲಿಷ್ ಭಾಷೆ ಮಾತನಾಡಲು ಮತ್ತು ಬರೆಯಲು ಬಲ್ಲವರಾಗಿರಬೇಕು, ಅಲ್ಲದೇ ಆರೋಗ್ಯವಂತರಾಗಿರಬೇಕು ಎಂಬ ಷರತ್ತುಗಳನ್ನೂ ಹಾಕಿದೆ. ವಿಶೇಷವೆಂದರೆ, ಪ್ರತಿಯೊಬ್ಬ ಅಧಿಕಾರಿಯೂ ತಮ್ಮ ಅರ್ಜಿಯ ಜೊತೆಗೆ, ತಾವು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮರ್ಥರಾಗಿದ್ದೇವೆ ಎಂಬುದನ್ನು ಸೂಚಿಸುವ ಪ್ರಮಾಣಪತ್ರ ಲಗತ್ತಿಸಬೇಕು.
ಏಡ್ಸ್, ಕ್ಷಯ ರೋಗ, ಟ್ರ ಕೋಮಾ, ಚರ್ಮವ್ಯಾಧಿ ಮತ್ತಿತರ ಸೋಂಕಿತ ಕಾಯಿಲೆಗಳಿಂದ ಮುಕ್ತವಾಗಿದ್ದೇವೆ ಮತ್ತು ಮಹಿಳಾ ಅಧಿಕಾರಿಗಳು ಗರ್ಭಿಣಿಯರಲ್ಲ ಎಂಬುದನ್ನು ದೃಢಪಡಿಸುವ ಪ್ರಮಾಣಪತ್ರ ನೀಡಬೇಕು ಎಂದು ಸಚಿವಾಲಯ ಸೂಚಿಸಿದೆ.
ತರಬೇತಿಯಲ್ಲಿ ಭಾಗವಹಿಸುವ ವರಿಗೆ ಅವರ ಏರ್ ಪೋರ್ಟ್ ನಿಂತ ಬ್ಯಾಂಕಾಕ್ ಗೆ ತೆರಳುವ ಮತ್ತು ಬರುವ ವಿಮಾನ ಪ್ರಯಾಣದ ವೆಚ್ಚ, ಸ್ಥಳೀಯ ತರಬೇತಿ ವೆಚ್ಚ, ವಸತಿ, ದಿನಕ್ಕೆ ರು.933 ಭತ್ಯೆ, ಜೀವ ಮತ್ತು ಆರೋಗ್ಯ ವಿಮೆಯನ್ನು ಸರ್ಕಾರವೇ ಒದಗಿಸಲಿದೆ. ಶುಕ್ರವಾರ ಅರ್ಜಿ ಸಲ್ಲಿಸಲು ಕೊನೆಯ ದಿನ.
Advertisement