ಕೃಷ್ಣಾ ನ್ಯಾಯಾಧೀಕರಣ: ಸೆ.10ರೊಳಗೆ ಅಭಿಪ್ರಾಯ ತಿಳಿಸಿ; ಕೇಂದ್ರಕ್ಕೆ ಸುಪ್ರೀಂ ಆದೇಶ

ಕೃಷ್ಣಾ ನ್ಯಾಯಾಧಿಕರಣವು ನದಿ ನೀರು ಹಂಚಿಕೆ ಕುರಿತು ಮರುವಿಚಾರಣೆ ನಡೆಸಬೇಕೆಂಬ ತೆಲಂಗಾಣ ರಾಜ್ಯದ ಕೋರಿಕೆಗೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೃಷ್ಣಾ ನ್ಯಾಯಾಧಿಕರಣವು ನದಿ ನೀರು ಹಂಚಿಕೆ ಕುರಿತು ಮರುವಿಚಾರಣೆ ನಡೆಸಬೇಕೆಂಬ ತೆಲಂಗಾಣ ರಾಜ್ಯದ ಕೋರಿಕೆಗೆ ಸಂಬಂಧಿಸಿದಂತೆ ತನ್ನ ನಿಲವು ತಿಳಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ವಿಚಾರಣೆ ವೇಳೆ ನ್ಯಾಯಮೂರ್ತಿಗಳು, ಈಗಾಗಲೇ ನ್ಯಾಯಾಧಿಕರಣ ತೀರ್ಪು ನೀಡಿರುವುದರಿಂದ ಮರು ವಿಚಾರಣೆ ನಡೆಸಲು ಸಾಧ್ಯವೇ? ನ್ಯಾಯಾಧಿಕರಣ ಮರು ವಿಚಾರಣೆ ನಡೆಸಬೇಕು ಎಂದು ಆದೇಶ ಕೋರಿ ತೆಲಂಗಾಣ ಸಲ್ಲಿಸಿರುವ ಅರ್ಜಿ ವಿಚಾರಣೆಗೆ ಯೋಗ್ಯವೇ ಎಂಬುದರ ಬಗ್ಗೆಯೂ ನ್ಯಾ. ದೀಪಕ್ ಮಿಶ್ರಾ ಅನುಮಾನ ವ್ಯಕ್ತಪಡಿಸಿದರು.

ಸೆ.10ರೊಳಗೆ ಅಭಿಪ್ರಾಯ ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದರು. ಬುಧವಾರ ವಿಚಾರಣೆ ವೇಳೆ ತೆಲಂಗಾಣ ರಾಜ್ಯದ ವಕೀಲರು, ಕೃಷ್ಣಾ ನ್ಯಾಯಾಧಿಕರಣದಿಂದ ನಮಗೆ (ವಿಭಜನಾ ಪೂರ್ವ ಆಂಧ್ರಕ್ಕೆ) ಸರಿಯಾಗಿ ನೀರು ಹಂಚಿಕೆ ಮಾಡಿಲ್ಲ. ಈಗ ಹೊಸ ರಾಜ್ಯ ಉದಯಿಸಿರುವುದರಿಂದ ಮರು ಹಂಚಿಕೆ ಮಾಡಬೇಕು ಎಂದು ಕೋರಿದರು.

ಇದಕ್ಕೆ ನ್ಯಾಯಮೂರ್ತಿಗಳು ಸಮ್ಮತಿಸಲಿಲ್ಲ. ಆಂಧ್ರಕ್ಕೆ ಹಂಚಿಕೆ ಮಾಡಿರುವ ನೀರನ್ನು ಉಭಯ ರಾಜ್ಯಗಳು (ಆಂಧ್ರ-ತೆಲಂಗಾಣ) ಹಂಚಿಕೊಳ್ಳಬೇಕು, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಹಂಚಿರುವ ನೀರಿನಲ್ಲಿ ಪಾಲು ಕೇಳುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ (1956) ಅನ್ವಯ ಮರು ವಿಚಾರಣೆಗೆ ಆದೇಶ ನೀಡಬೇಕು ಎಂದು ತೆಲಂಗಾಣ ರಾಜ್ಯದ ವಕೀಲರು ಮನವಿ ಮಾಡಿದರು.

ಈ ಮನವಿಗೆ ಕರ್ನಾಟಕ ಮತ್ತು ಹಾರಾಷ್ಟ್ರ ವಕೀಲರು ಆಕ್ಷೇಪಿಸಿದರು. ನ್ಯಾಯಾಧಿಕರಣ ಈಗಾಗಲೇ ತೀರ್ಪು ಪ್ರಕಟಿಸಿದೆ. ತೀರ್ಪು ಸರಿಯಾಗಿಯೇ ಇದೆ. ಒಂದು ಬಾರಿ ನ್ಯಾಯಾಧಿಕರಣಕ್ಕೆ ವಹಿಸಿದ ನಂತರ ಮತ್ತೆ ಆ ವಿಚಾರವನ್ನು ಸುಪ್ರೀಕೋರ್ಟ್‍ನಲ್ಲಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಮಹಾರಾಷ್ಟ್ರ ಪರ ವಕೀಲರು ವಾದಿಸಿದರು.

ಇದೇ ವೇಳೆ, ಕೃಷ್ಣಾ ನ್ಯಾಯಾಧಿಕರಣದ ಅಧ್ಯಕ್ಷ ನ್ಯಾ. ದಿಲೀಪ್ ಕುಮಾರ್ ಸೇಠ್ ವೈಯಕ್ತಿಕ ಕಾರಣಗಳಿಗಾಗಿ ರಾಜಿನಾಮೆ ನೀಡಿದ್ದಾರೆ, ಆದ್ದರಿಂದ ನ್ಯಾಯಾಧಿಕರಣಕ್ಕೆ ತ್ವರಿತ ಅಧ್ಯಕ್ಷರನ್ನು ನೇಮಕ ಮಾಡಬೇಕು ಎಂದು ತೆಲಂಗಾಣ ಪರ ವಕೀಲರು ಮನವಿ ಮಾಡಿಕೊಂಡರು. ಕೃಷ್ಣಾ ನ್ಯಾಯಾಧಿಕರಣವು ಈಗಾಗಲೇ ತನ್ನ ಐತೀರ್ಪು ಪ್ರಕಟಿಸಿ, ಸ್ಪಷ್ಟೀಕರಣ ಕೋರಿದ್ದ ಅರ್ಜಿಗಳನ್ನು ಇತ್ಯರ್ಥಪಡಿಸಿದೆ.

ಐತೀರ್ಪು ಹೊರ ಬಿದ್ದ ನಂತರ ಆಂಧ್ರ ವಿಭಜನೆ ಆಗಿರುವ ಹಿನ್ನೆಲೆಯಲ್ಲಿ ನೂತನ ತೆಲಂಗಾಣ ರಾಜ್ಯವು ಕೃಷ್ಣಾ ನದಿ ನೀರನ್ನು ಮರು ಹಂಚಿಕೆ ಕೋರಿ ಸುಪ್ರೀಂಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದೆ. ಕೃಷ್ಣಾ ನ್ಯಾಯಾಧಿಕರಣವು ಹೊಸದಾಗಿ ವಿಚಾರಣೆ ನಡೆಸಿ ನದಿ ನೀರನ್ನು ಮರು ಹಂಚಿಕೆ ಮಾಡಬೇಕು ಎಂಬುದು ತೆಲಂಗಾಣದ ಬೇಡಿಕೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com