ಹೆತ್ತ ಮಗನಿಗೇ ಹುಚ್ಚನ ಪಟ್ಟ ಕಟ್ಟಲು ಇಂದ್ರಾಣಿ ಸಂಚು

ಶೀನಾ ಬೋರಾ ಕೊಲೆ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದಿದ್ದು, ಇಂದ್ರಾಣಿ ಮತ್ತು ಆಕೆಯ ಎರಡನೇ ಪತಿ ಸಂಜೀವ್ ಖನ್ನಾ...
ಮಿಖಾಯಿಲ್ ಬೋರಾ-ಇಂದ್ರಾಣಿ
ಮಿಖಾಯಿಲ್ ಬೋರಾ-ಇಂದ್ರಾಣಿ

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದಿದ್ದು, ಇಂದ್ರಾಣಿ ಮತ್ತು ಆಕೆಯ ಎರಡನೇ ಪತಿ ಸಂಜೀವ್ ಖನ್ನಾ ಶೀನಾ ಹತ್ಯೆಯ ಬಳಿಕ ಆಕೆಯ ಸಹೋದರ ಹಾಗೂ ತನ್ನ ಸ್ವಂತ ಮಗನಿಗೆ ಹುಚ್ಚನ ಪಟ್ಟ ಕಟ್ಟಿ ಇಡೀ ಪ್ರಕರಣವನ್ನು ಮುಚ್ಚಿ ಹಾಕುವ ಸಂಚು ನಡೆಸಿದ್ದು ತನಿಖೆ ವೇಳೆ ಬಯಲಾಗಿದೆ.

2012ರಲ್ಲಿ ಶೀನಾ ಹತ್ಯೆ ದಿನ ತನ್ನನ್ನೂ ಮುಂಬೈ ಹೊಟೇಲ್ ಗೆ ಕರೆಸಿಕೊಂಡು ಇಂದ್ರಾಣಿ, ಖನ್ನಾ ಮಾದಕ ವಸ್ತು ಬೆರೆಸಿದ ಪಾನೀಯ ನೀಡಿದ್ದರು. ಆ ಮೂಲಕ ತನ್ನನ್ನೂ ಮುಗಿಸಲು ತನ್ನ ತಾಯಿ ಮತ್ತು ಆಕೆಯ ಮಾಜಿ ಗಂಡ ಸಂಚು ರೂಪಿಸಿದ್ದರು ಎಂದು ಮಿಖೈಲ್ ಶನಿವಾರ ಪೊಲೀಸರಿಗೆ ತಿಳಿಸಿದ ಬೆನ್ನಲ್ಲೇ ಮಾನಸಿಕ ರೋಗ ತಜ್ಞರೊಬ್ಬರು ನೀಡಿರುವ ಹೇಳಿಕೆ ಹೊರಬಿದ್ದಿದೆ. ಪ್ರಕರಣದ ಬಗ್ಗೆ ಸ್ವಯಂ ಪ್ರೇರಿತರಾಗಿ ಪೊಲೀಸರಿಗೆ ಹೇಳಿಕೆ ನೀಡಿರುವ ಮುಂಬೈನ ಮಾನಸಿಕ ರೋಗ ತಜ್ಞರು, ಶೀನಾ ಕೊಲೆ ಘಟನೆ ನಡೆದ ಕೆಲವೇ ದಿನಗಳಲ್ಲಿ ಇಂದ್ರಾಣಿ ತಮ್ಮನ್ನು ಭೇಟಿ ಮಾಡಿ, ಮಿಖೈಲ್ ಮಾನಸಿಕ ಅಸ್ವಸ್ಥ ಎಂದು ನಕಲಿ ವೈದ್ಯಕೀಯ ಪ್ರಮಾಣ ಪತ್ರ ನೀಡುವಂತೆ ಕೇಳಿದ್ದರು ಎಂಬ ಸಂಗತಿ ಹೊರಹಾಕಿದ್ದಾರೆ.

ಈ ಮೂಲಕ ಇಂದ್ರಾಣಿ ಮತ್ತು ಖನ್ನಾ ಮಿಖೈಲ್ ಗೆ ಹುಚ್ಚನಪಟ್ಟ ಕಟ್ಟಿ, ಆತನ ಮಾತುಗಳಿಗೆ ಯಾವುದೇ ಬೆಲೆ ಇಲ್ಲದಂತೆ ಮಾಡುವ ಸಂಚು ಮಾಡಿದ್ದು ಬಯಲಾಗಿದೆ. ಶೀನಾ ಅಮೆರಿಕಕ್ಕೆ ಹೋಗಿದ್ದಾಳೆ ಎಂಬ ಇಂದ್ರಾಣಿ ಮಾತನ್ನು ನಂಬದೆ ಆಕೆಯ ಬಗ್ಗೆ ಪದೇ ಪದೆ ಮಾಹಿತಿ ಕೆದಕುತ್ತಿದ್ದ ಮಿಖಾಯಿಲ್ ನನ್ನು ಸಾರ್ವಜನಿಕರ ಕಣ್ಣಲ್ಲಿ ಹುಚ್ಚನನ್ನಾಗಿ ಮಾಡುವುದೇ ಇಂದ್ರಾಣಿಯ ಈ ಹುನ್ನಾರದ ಉದ್ದೇಶವಾಗಿತ್ತು ಎಂದು ಪೊಲೀಸರು ಶಂಕಿಸಿದ್ದಾರೆ.

ವಿಚಾರಣೆ ವೇಳೆ ಹಣಕಾಸಿನ ವಿಷಯದಲ್ಲಿ ಶೀನಾ ಮತ್ತು ತನ್ನ ನಡುವೆ ಸಂಘರ್ಷವಿದ್ದದ್ದು ನಿಜ ಎಂದು ಒಪ್ಪಿಕೊಂಡಿರುವ ಇಂದ್ರಾಣಿ, ಆದರೆ, ತಾನು ಆಕೆಯ ಕೊಲೆ ಮಾಡಿಲ್ಲ ಎಂದು ಹೇಳಿದ್ದಾಳೆ. ಅಲ್ಲದೆ, ಕೃತ್ಯದ ಬಳಿಕ ಮಾರಾಟಮಾಡಲಾಗಿದ್ದ ಶೀನಾ ಕೊಲೆಗೆ ಬಳಸಿದ ಕಾರನ್ನು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈ ನಡುವೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ, ಸಂಜೀವ್ ಖನ್ನಾ ಹಾಗೂ ಆಕೆಯ ಡ್ರೈವರ್ ರಾಯ್ ಸೇರಿದಂತೆ ಮೂವರನ್ನೂ ಪೊಲೀಸರು ಭಾನುವಾರ ಶೀನಾ ಮೃತದೇಹ ಪತ್ತೆಯಾದ ರಾಯಘಡದ ಪೆನ್ ಬಳಿಯ ಹಳ್ಳಿಗೆ ಮಹಜರಿಗೆ ಕರೆದೊಯ್ದಿದ್ದರು.

ರಾಜಕಾರಣಿಯಿಂದ ಒತ್ತಡವಿತ್ತೇ?
ಶೀನಾ ಶವ 2012ರಲ್ಲಿ ಪತ್ತೆಯಾಗಿದ್ದರೂ ತನಿಖೆ ನಿಧಾನಗತಿಯಲ್ಲಿ ಸಾಗಲು ರಾಜಕಾರಣಿಯೊಬ್ಬರು ಪೊಲೀಸರ ಮೇಲೆ ಒತ್ತಡ ಹೇರಿರಬಹುದು ಎಂದು ದಿ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ. ಮುಖರ್ಜಿ ಕುಟುಂಬಕ್ಕೆ ಎರಡು ಪಕ್ಷಗಳ ಜತೆಗೆ ನಿಕಟ ಸಂಪರ್ಕ ಇತ್ತು. ಅವರಲ್ಲಿ ಯಾರೋ ಒಬ್ಬರು ಈ ಕುರಿತ ತನಿಖೆ ಹಳ್ಳಹಿಡಿಯುವಂತೆ ನೋಡಿಕೊಂಡಿರಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com