ಚೆನ್ನೈ ಪ್ರವಾಹ: ಸಾಮಾಜಿಕ ತಾಣಗಳೇ ಹೀರೋಗಳು

ಫೇಸ್‍ಬುಕ್, ಟ್ವಿಟರ್‍ನಂತಹ ಸಾಮಾಜಿಕ ತಾಣ-ಗಳು ಸಂತ್ರಸ್ತರಿಗೆ ನೆರವಾಗುವ ವೇದಿಕೆಯಾಗುತ್ತಿವೆ. ಪ್ಯಾರಿಸ್‍ನಲ್ಲಿ...
ಸಂತ್ರಸ್ತರಿಗೆ ಆಹಾರ ವಿತರಣೆ...
ಸಂತ್ರಸ್ತರಿಗೆ ಆಹಾರ ವಿತರಣೆ...
ಚೆನ್ನೈ: ಫೇಸ್‍ಬುಕ್, ಟ್ವಿಟರ್‍ನಂತಹ ಸಾಮಾಜಿಕ ತಾಣ-ಗಳು ಸಂತ್ರಸ್ತರಿಗೆ ನೆರವಾಗುವ ವೇದಿಕೆಯಾಗುತ್ತಿವೆ. ಪ್ಯಾರಿಸ್‍ನಲ್ಲಿ ಇತ್ತೀಚೆಗೆ ಉಗ್ರರ ದಾಳಿಯಾದಾಗ ಹೇಗೆ ಜನರು `ಓಪನ್ ಡೋರ್' ಎಂಬ ಅಭಿಯಾನದ ಮೂಲಕ ಅಪರಿಚಿತರಿಗೆ ಆಶ್ರಯ ನೀಡಿದರೋ, ಅದೇ ಮಾದರಿಯನ್ನು ಚೆನ್ನೈನಲ್ಲೂ ಅನುಸರಿಸಲಾಗುತ್ತಿದೆ. 
ಬೀದಿಪಾಲಾದವರಿಗೆ ಎಷ್ಟೋ ಮಂದಿ ತಮ್ಮ ಮನೆಗಳಲ್ಲೇ ಆಶ್ರಯ ನೀಡಿದರು. ನಾನು ಪೂರ್ವ ತಂಬರಂನಲ್ಲಿ ವಾಸಿಸುತ್ತಿದ್ದೇನೆ. ನನ್ನ ಮನೆಯಲ್ಲಿ 10 ಮಂದಿ ವಾಸಿಸುವಷ್ಟು ಸ್ಥಳಾವಕಾಶವಿದೆ ಎಂದು ಒಬ್ಬರು ತಮ್ಮ ಮೊಬೈಲ್ ಸಂಖ್ಯೆ ನೀಡಿದರೆ, ಮತ್ತೊಬ್ಬರು, ನಮ್ಮ ತಂಡವು 3 ಸಾವಿರ ಮಂದಿಗಾಗುವಷ್ಟು ಆಹಾರ ತಯಾರಿಸಿದೆ. ಯಾರು ಬೇಕಾದರೂ ಬಂದು ಹಸಿವು ನೀಗಿಸಿಕೊಳ್ಳಬಹುದು ಎಂದರು. 
ಮಗದೊಬ್ಬರು, ``ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ನೆಟ್‍ವರ್ಕ್ ಹೆಸರು ನೀಡಿದರೆ, ನಾನೇ ರೀಚಾರ್ಜ್ ಮಾಡುತ್ತೇನೆ'' ಎಂದೂ, ಇನ್ನೊಬ್ಬರು, ``ಉಚಿತವಾಗಿ ಕಾರು, ಬೈಕುಗಳನ್ನು ರಿಪೇರಿ ಮಾಡಿಕೊಡುತ್ತೇನೆ'' ಎಂದು ಟ್ವಿಟರ್‍ನಲ್ಲಿ ಬರೆದುಕೊಂಡರು. ಎಲ್ಲೆಲ್ಲಿ ಮಳೆ ಪರಿಸ್ಥಿತಿ ಹೇಗಿದೆ, ಎಲ್ಲೆಲ್ಲಿ ಪರಿಹಾರ ಶಿಬಿರಗಳಿವೆ, ಯಾರನ್ನು ಸಂಪರ್ಕಿಸಿದರೆ ಆಶ್ರಯ ದೊರೆಯುತ್ತದೆ. ಸಂತ್ರಸ್ತರಿಗೆ ಅಗತ್ಯ ಸಾಮಗ್ರಿಗಳನ್ನು ಪೂರೈಸುವುದು ಹೇಗೆ... ಹೀಗೆ ಜನ ಒಂದಲ್ಲ ಒಂದು ರೀತಿಯಲ್ಲಿ ಸಂತ್ರಸ್ತರ ಕಷ್ಟಕ್ಕೆ ಸ್ಪಂದಿಸಿದರು. 
ತಮಿಳು ನಟ ಸಿದ್ಧಾರ್ಥ್ ಅವರು ನಗರದಾದ್ಯಂತ ಸಂಚರಿಸಿ ಪ್ರವಾಹದಲ್ಲಿ ಸಿಲುಕಿಕೊಂಡವರಿಗೆ ಪಿಕ್‍ಅಪ್, ಡ್ರಾಪ್ ವ್ಯವಸ್ಥೆ ಕಲ್ಪಿಸಿದರು. ಕಾರ್ಪೋರೇಟ್ ಕಂಪನಿಗಳೂ ತಮ್ಮ ಲಾಭದ ಉದ್ದೇಶವನ್ನು ಮರೆತು, ನೆರವಿಗೆ ಧಾವಿಸಿದವು. ಹಲವು ದೂರ ಸಂಪರ್ಕ ಕಂಪನಿಗಳು ಗ್ರಾಹಕರಿಗೆ ಉಚಿತ ಟಾಕ್ ಟೈಂ, ಸಾಲದ ರೂಪದ ರೀಚಾರ್ಜ್ ಸೌಲಭ್ಯ ಒದಗಿಸಿದವು. 
ಓಲಾದಂತಹ ಕ್ಯಾಬ್ ಕಂಪನಿಗಳು ದೋಣಿಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯಕ್ಕಿಳಿದವು. ರೆಸ್ಟೋರೆಂಟ್‍ಗಳಿಂದ ಹಿಡಿದು ಸಿನಿಮಾ ಥಿಯೇಟರ್‍ಗಳವರೆಗೆ ಅನೇಕ ಸಂಸ್ಥೆಗಳು ನಿರಾಶ್ರಿತರಿಗೆ ಆಶ್ರಯ ಒದಗಿಸಿದವು. ಹಲವು ದಿನಗಳ ಕಾಲ ಚೆನ್ನೈರೈನ್ಸ್, ಚೆನ್ನೈ ಫ್ಲಡ್ಸ್, ಚೆನ್ನೈ ರೈನ್ಸ್ ಹೆಲ್ಪ್, ಪ್ರೇ ಫಾರ್ ಚೆನ್ನೈ ಎಂಬಿತ್ಯಾದಿ ಹ್ಯಾಷ್‍ಟ್ಯಾಗ್‍ಗಳು ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆದವು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com