ಬಂಡೆಯೇರಿ, ಬಾನಲ್ಲಿ ತೇಲಾಡಿ!

ಸಾಹಸ ಕ್ರೀಡೆಗಳಲ್ಲಿ ಸಿಬ್ಬಂದಿಯನ್ನು ತೊಡಗಿಸುವ ಮೂಲಕ ಅವರಲ್ಲಿ ತಂಡ ಕಲ್ಪನೆ ಮತ್ತು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ನವದೆಹಲಿ: ಸಾಹಸ ಕ್ರೀಡೆಗಳಲ್ಲಿ ಸಿಬ್ಬಂದಿಯನ್ನು ತೊಡಗಿಸುವ ಮೂಲಕ ಅವರಲ್ಲಿ ತಂಡ ಕಲ್ಪನೆ ಮತ್ತು ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವ ಮನಃಸ್ಥಿತಿಯನ್ನು ಬೆಳೆಸುವ ಹಾಗೂ ಸ್ಥಗಿತಗೊಂಡಂತಿರುವ ಜೀವನಕ್ರಮದಲ್ಲಿ ಸಂಚಲನೆ ಮೂಡಿಸುವ ವಿನೂತನ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. 
ಈ ಹಿನ್ನೆಲೆಯಲ್ಲಿ, ತನ್ನೆಲ್ಲ ಸಿಬ್ಬಂದಿ ಬಂಡೆ ಏರುವುದು, ಪ್ಯಾರಾಗ್ಲೈಡಿಂಗ್‍ನಂಥ ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಲು ಮುಂದಾಗಬೇಕು. ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಸುತ್ತೋಲೆ ಹೊರಡಿಸಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.
ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ, ತಂಡದಲ್ಲಿರುವ ಇತರ ಸದಸ್ಯರೊಂದಿಗೆ ಒಗ್ಗೂಡಿ, ಸಹಕಾರದಿಂದ ಕೆಲಸ ಮಾಡುವ ಮನಃ ಸ್ಥಿತಿಯನ್ನು ಸಿಬ್ಬಂದಿ ಬೆಳೆಸಿಕೊಳ್ಳುವುದು ಸುಲಭವಾಗುತ್ತದೆ. ಸಮಸ್ಯೆಗಳನ್ನು ಎದುರಿಸುವುದಲ್ಲದೇ, ದೀರ್ಘಕಾಲದ ಪರಿಹಾರ ಕ್ರಮಗಳಿಗೆ ಕೆಲಸ ಮಾಡುವ ಜಿಗುಟುತನ ಪ್ರಾಪ್ತವಾಗುತ್ತದೆ ಎಂದು ಸಿಬ್ಬಂದಿ ಮತ್ತು ತರಬೇತಿ ಇಲಾಖೆ (ಡಿಒಡಿಪಿ) ಈ ಕುರಿತು ಹೊರಡಿಸಿದ ಆದೇಶದಲ್ಲಿ ಹೇಳಿದೆ. 
ಸರ್ಕಾರದಿಂದಲೇ ಏರ್ಪಾಡು: ಯೋಜನೆಯ ಪ್ರಕಾರ, ಹಿಮಾಚಲಪ್ರದೇಶದ ಮನಾಲಿಯಲ್ಲಿರುವ ಅಟಲ್ ಬಿಹಾರಿ ವಾಜಪೇಯಿ ಪರ್ವತಾರೋಹಣ ಮತ್ತು ಪೂರಕ ಕ್ರೀಡೆಗಳ ಸಂಸ್ಥೆ, ಜಮ್ಮು ಕಾಶ್ಮೀರದ ಗುಲ್‍ಮಾರ್ಗ್ ನಲ್ಲಿರುವ ಭಾರತೀಯ ಸ್ಕೀಯಿಂಗ್ ಹಾಗೂ ಪರ್ವತಾರೋಹಣ ಸಂಸ್ಥೆ, ಗೋವಾದ ವಾಸ್ಕೋಡ ಗಾಮಾದಲ್ಲಿರುವ ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆ ಹಾಗೂ ಉತ್ತರಕಾಶಿಯಲ್ಲಿರುವ ನೆಹರು ಪರ್ವತಾರೋಹಣ ಕೇಂದ್ರಗಳಂತ ಆಯ್ದ ಕೇಂದ್ರಗಳಲ್ಲಿ ಸಿಬ್ಬಂದಿಗೆ ಐದರಿಂದ ಏಳು ದಿನಗಳ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. 
ಚಾರಣ, ಪರ್ವತಾರೋಹಣ, ಬಂಡೆ ಏರುವುದು, ವಿವಿಧ ಭೂಮೇಲ್ಮೈ ಪ್ರದೇಶದಲ್ಲಿ ಸೈಕಲ್ ಓಡಿಸುವುದು, ಸ್ಕೀಯಿಂಗ್, ಸಪಿರ್sಂಗ್, ಬೋಟಿಂಗ್, ಸ್ನಾರ್‍ಕೀಲಿಂಗ್ (ಆಮ್ಲಜನಕ ಕಿಟ್ ಇಲ್ಲದೇ ನೀರೊಳಗೆ ವಿಹರಿಸುವುದು), ತೆಪ್ಪದಾಟ (ರ್ಯಾಫಿ್ಟಂಗ್), ಪ್ಯಾರಾ ಸೇಲಿಂಗ್, ಬಲೂನಿಂಗ್ (ಬಿಸಿಗಾಳಿ ತುಂಬಿದ ಬಲೂನಿನ ನೆರವಿನಿಂದ ತೇಲುವುದು), ಪ್ಯಾರಾ ಗ್ಲೈಡಿಂಗ್, ಜಂಗಲ್ ಸಫಾರಿ, ಮರುಭೂಮಿ ಸಫಾರಿ, ಬೀಚ್ ಟ್ರೆಕ್ಕಿಂಗ್ ಮತ್ತು ಪರಿಸರ ಜಾಗೃತಿ ಶಿಬಿರಗಳಲ್ಲಿ ಪಾಲ್ಗೊಳ್ಳುವುದು ಯೋಜನೆಯಲ್ಲಿ ಸೇರಿದೆ. 
ಇಂಥ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲೆಂದು ಅತ್ಯುತ್ತಮ ಸೇವಾ ದಾಖಲೆ ಹೊಂದಿರುವ ಹಾಗೂ ಶಿಫಾರಸು ಮಾಡಲ್ಪಟ್ಟ ಪ್ರತಿ ಸಿಬ್ಬಂದಿಗೆ ಗರಿಷ್ಠ ರು.20,000ದವರೆಗೆ ಹಣಕಾಸು ನೆರವು ಹಾಗೂ ವಿಶೇಷ ಸಾಮಾನ್ಯ ರಜೆ ನೀಡಲು ಕೇಂದ್ರ ಸರ್ಕಾರ ಸಿದ್ಧವಿದೆ. ಪ್ರತಿಯೊಂದು ಸಚಿವಾಲಯ, ಇಲಾಖೆಯ ಇಬ್ಬರು ಅಧಿಕಾರಿಗಳಿಗೆ ವಾರ್ಷಿಕ ಶೇ.100ರಷ್ಟು ಹಣಕಾಸು ವ್ಯವಸ್ಥೆ ಮಾಡಲಾಗುವುದು ಎಂದು ಕೇಂದ್ರದ ಆದೇಶ ವಿವರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com