ನವದೆಹಲಿ: ದಲಿತರನ್ನು ನಾಯಿಗೆ ಹೋಲಿಸಿ ಹೇಳಿಕೆ ನೀಡಿದ್ದರೆನ್ನಲಾದ ಕೇಂದ್ರ ಸಚಿವ ಜ.ವಿ.ಕೆ. ಸಿಂಗ್ ವಿರುದ್ಧದ ಪ್ರಕರಣವನ್ನು ದೆಹಲಿ ನ್ಯಾಯಾಲಯ ವಜಾ ಮಾಡಿದೆ.
ಶಬ್ದವೊಂದನ್ನು ನಿಶ್ಚಿತವಾಗಿ ಇಂಥದೇ ಜಾತಿ ಅಥವಾ ಪಂಗಡಕ್ಕೆ ಅಥವಾ ಮನುಷ್ಯರನ್ನು ಉದ್ದೇಶಿಸಿ ಬಳಸಲಾಗಿದೆ ಎಂದು ಹೇಳಲಾಗದು. ಶಬ್ದವನ್ನು ಅದನ್ನು ಬಳಸುವ ಸಂದರ್ಭ ಆಧರಿಸಿ ಅರ್ಥ ಹೊಂದುತ್ತದೆ. ಅದನ್ನು ಪ್ರತ್ಯೇಕವಾಗಿ ಅರ್ಥೈಸುವುದು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಹೀಗಾಗಿ, ಜ.ಸಿಂಗ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂಬ ವಾದ ಪುರಸ್ಕರಿಸಲಾಗದು ಎಂದು ನ್ಯಾಯಾಲಯ ಪ್ರತಿಪಾದಿಸಿದೆ. ರಾಜಕೀಯವಾಗಿ ನೀಡುವ ಹೇಳಿಕೆಯನ್ನು ನಿಗದಿತ ಸಮುದಾಯಕ್ಕೇ ಗುರಿಯಾಗಿಸಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗದು ಎಂದು ಕೋರ್ಟ್ ಪ್ರತಿಪಾದಿಸಿದೆ.