

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣ 'ರಾಜಕೀಯ ಪಿತೂರಿ' ಎಂಬ ಆರೋಪವನ್ನು ತಳ್ಳಿಹಾಕಿರುವ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು, ನ್ಯಾಯಾಲಯ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ, ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ. ಇದನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಬೇಕು ಎಂದು ಬುಧವಾರ ಹೇಳಿದ್ದಾರೆ.
'ನಿನ್ನೆ ಕಾಂಗ್ರೆಸ್ ನಾಯಕ ಗುಲಾಂ ನಬಿ ಅಝಾದ್ ಅವರು, ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ತೀರ್ಪಿನ ನಂತರ ಪ್ರಜಾಪ್ರಭುತ್ವ ಅಪಾಯದಲ್ಲಿದೆ' ಎಂದಿದ್ದರು. ಅಝಾದ್ ಅವರ ಹೇಳಿಕೆಯನ್ನು ನಾನು ಒಪ್ಪುತ್ತೇನೆ. ಆದರೆ ಅದು ಕಾಂಗ್ರೆಸ್ ಪಕ್ಷದಿಂದಲೇ ಅಪಾಯ ಎದುರಾಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ನಾಯ್ಡು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
'ನ್ಯಾಯಾಲಯ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸುವುದು ಮತ್ತು ಅಸಂವಿಧಾನಿಕವಾಗಿ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುವ ಕಾಂಗ್ರೆಸ್‌ನ ತಂತ್ರಗಳಿಂದಲೇ ಪ್ರಜಾಪ್ರಭುತ್ವಕ್ಕೆ ಅಪಾಯ ಎಂಬುದು ಸ್ಪಷ್ಟವಾಗುತ್ತದೆ' ಎಂದರು.
ಪ್ರತಿಪಕ್ಷ ಕಾಂಗ್ರೆಸ್ ಸಂಸತ್‌ನ್ನು ಹೈಜಾಕ್ ಮಾಡುತ್ತಿದೆ ಎಂದು ಆರೋಪಿಸಿದ ನಾಯ್ಡು, ಸೇಡಿನ ರಾಜಕೀಯ ಮಾಡುತ್ತಿರುವುದು ಸರ್ಕಾರ ಅಲ್ಲ, ಕಾಂಗ್ರೆಸ್ ಪಕ್ಷ ಎಂದು ವಾಗ್ದಾಳಿ ನಡೆಸಿದರು.