ದೇಶದ್ರೋಹ ಪ್ರಕರಣ: ಹಾರ್ದಿಕ್ ಪಟೇಲ್ ಗೆ ಜಾಮೀನು ತಿರಸ್ಕಾರ
ಸೂರತ್: ದೇಶ ದ್ರೋಹ ಪ್ರಕರಣದ ಆರೋಪದ ಮೇಲೆ ಜೈಲು ಪಾಲಾಗಿರುವ ಪಟೇಲ್ ಸಮುದಾಯದ ಮೀಸಲು ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರ ಜಾಮೀನು ಕೋರಿಕೆ ಅರ್ಜಿಯನ್ನು ಸೂರತ್ ನ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.
22ರ ಹರೆಯದ ಹಾರ್ದಿಕ್ ಪಟೇಲ್ ಅವರ ಜಾಮೀನು ಅರ್ಜಿಯನ್ನು ಪ್ರಧಾನ ಜಿಲ್ಲಾ ನ್ಯಾಯಾಧೀಶೆ ಗೀತಾ ಗೋಪಿ ಅವರು ತಿರಸ್ಕರಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಪೊಲೀಸರನ್ನೇ ಕೊಂದು ಹಾಕಿ ಎಂದು ಕರೆ ನೀಡುವ ಮೂಲಕ ಸರಕಾರದ ವಿರುದ್ಧ ಹಿಂಸಾತ್ಮಕ ದಂಗೆಯನ್ನು ಪ್ರಚೋದಿಸಿದ ಆಪಾದನೆಗೆ ಹಾರ್ದಿಕ್ ಪಟೇಲ್ ಗುರಿಯಾಗಿದ್ದಾರೆ.
ಓಬಿಸಿ ಕೋಟಾದಲ್ಲಿ ಪಟೇಲ್ ಸಮುದಾಯಕ್ಕೆ ಮೀಸಲು ಒದಗಿಸುವಂತೆ ಆಗ್ರಹಿಸಿ ಹಾರ್ದಿಕ್ ಪಟೇಲ್ ಈ ವರ್ಷಾರಂಭದಿಂದ ಗುಜರಾತ್‌ನಲ್ಲಿ ಭಾರೀ ಜನಾಂದೋಲನವನ್ನು ಹುಟ್ಟು ಹಾಕಿದ್ದರು.
ಈಗ ಲಾಜಪುರ ಜೈಲಿನಲ್ಲಿ ಇರುವ ಹಾರ್ದಿಕ್ ಪಟೇಲ್ ತಮ್ಮನ್ನು ಸುಳ್ಳು ಆರೋಪದ ಮೇಲೆ ಕಾನೂನು ಬಾಹಿರವಾಗಿ ಬಂಧಿಸಿಡಲಾಗಿದೆ ಎಂದು ಆರೋಪಿಸಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.