
ನವದೆಹಲಿ: ಅನಕ್ಷರಸ್ಥರು ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ತಡೆಹಿಡಿಯುವ ಉದ್ದೇಶವನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್, ಜನರ ಸಾಂವಿಧಾನಿಕ ಹಕ್ಕುಗಳಿಗೆ ನೀಡುವ ಕಾರಣಬದ್ಧ ಅಡ್ಡಿಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆಯನ್ನು ನಿಗದಿಮಾಡಿರುವ ಹರ್ಯಾಣ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಮನೆಗಳಲ್ಲಿ ಕಡ್ಡಾಯವಾಗಿ ಶೌಚಾಲಯಗಳನ್ನು ಹೊಂದಿರಬೇಕು ಮತ್ತು ಅಂತವರು ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯ ಎಂದು ಕಾನೂನು ಜಾರಿಗೆ ತಂದಿರುವ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಸ್ವಾಗತಿಸಿದೆ.
ಪಂಚಾಯತ್ ಚುನಾವಣೆಗಳಲ್ಲಿ ಸ್ಪರ್ಧಿಸಬೇಕಾದರೆ ಪುರುಷರು ಕಡ್ಡಾಯವಾಗಿ 10ನೇ ತರಗತಿ, ಮಹಿಳೆಯರು 8ನೇ ತರಗತಿ ಮತ್ತು ದಲಿತರು 5ನೇ ತರಗತಿ ತೇರ್ಗಡೆ ಹೊಂದಿರಬೇಕೆಂದು ಹರ್ಯಾಣ ಸರ್ಕಾರ ನಿಯಮವನ್ನು ಜಾರಿಗೆ ತಂದಿದೆ. ಆದರೆ ಇದು ಪ್ರಜೆಗಳ ಹಕ್ಕನ್ನು ಕಿತ್ತುಕೊಂಡಂತಾಗುತ್ತದೆ, ಅದನ್ನು ತೆಗೆದುಹಾಕಬೇಕೆಂದು ಅಲ್ಲಿನ ಮಹಿಳಾ ಸ್ಪರ್ಧಾಕಾಂಕ್ಷಿಗಳು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹರ್ಯಾಣ ಸರ್ಕಾರದ ಪಂಚಾಯತ್ ರಾಜ್ ತಿದ್ದುಪಡಿ ಮಸೂದೆ 2015ನ್ನು ಪ್ರಶ್ನಿಸಿ ಫತೇಹಾಬಾದ್, ಹಿಸ್ಸಾರ್ ಮತ್ತು ಜಜ್ಜಾರ್ ಜಿಲ್ಲೆಗಳ ಮಹಿಳೆಯರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ರಾಜ್ಯದ ಶೇಕಡಾ 83.06ರಷ್ಟು ಗ್ರಾಮೀಣ ಮತ್ತು ಶೇಕಡಾ 67ರಷ್ಟು ನಗರ ಪ್ರದೇಶಗಳ ಮಹಿಳೆಯರು ಈ ಕಾನೂನು ಜಾರಿಗೆ ಬಂದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿರುತ್ತಾರೆ ಎಂದು ವಿವರಿಸಿದ್ದರು.
Advertisement