
ನಿಮ್ಮ ವಿವೇಚನಾಧಿಕಾರ ಬಳಸಿ ಕಳಸಾ ಬಂಡೂರಿ ಕುಡಿಯುವ ನೀರು ಯೋಜನೆಗೆ ಮಹದಾಯಿಯಿಂದ 7 ಟಿಎಂಸಿ ನೀರು ಒದಗಿಸಿ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಗೆ ಮನವಿ ಮಾಡಿದ್ದಾರೆ.
``ಕುಡಿಯುವ ನೀರಿಗಾಗಿ ಜನರು ಕಳೆದ ಆರು ತಿಂಗಳಿಂದ ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ. ನನ್ನ ಅನುಭವದ ಪ್ರಕಾರ, ನ್ಯಾಯಾಧೀಕರಣ ತನ್ನ ಅಂತಿಮ ತೀರ್ಪು ನೀಡಲು ಸಾಕಷ್ಟು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆದ್ದರಿಂದ ಕುಡಿಯುವ ನೀರಿಗಾಗಿ 7 ಟಿಎಂಸಿ ನೀರು ಬಳಕೆ ಮಾಡಿಕೊಳ್ಳಲು ಅವಕಾಶ ನೀಡಿ ನೀವೇ ನಿರ್ಧಾರ ಕೈಗೊಳ್ಳಿ'' ಎಂದಿದ್ದಾರೆ. ಶುಕ್ರವಾರ ಪ್ರಧಾನಿಯವರನ್ನು ಭೇಟಿ ಈ ಸಂಬಂಧ ಸುದೀರ್ಘ ಚರ್ಚೆ ನಡೆಸಿದ ದೇವೇಗೌಡರು, ತಾವು ಪ್ರಧಾನಿ ಆಗಿದ್ದಾಗ ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯ ಪೂರೈಸಲು 9 ಟಿಎಂಸಿ ನೀರು ಬಳಸಿಕೊಳ್ಳಲು ಅನುಮತಿ ನೀಡಿದ್ದನ್ನು ಪ್ರಧಾನಿ ಮೋದಿ ಅವರಿಗೆ ನೆನಪಿಸಿದರು ``ಬೆಂಗಳೂರಿಗೆ ಕಾವೇರಿ ನಾಲ್ಕನೇ ಹಂತದ ಕುಡಿಯುವ ನೀರಿನ ಯೋಜನೆಗೆ 9 ಟಿಎಂಸಿ ನೀರು ಬಳಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ಅನುಮತಿ ನೀಡಲು ನಿರಾಕರಿಸಿತ್ತು. ಆದರೆ, ನಾನು ಪ್ರಧಾನಿ ಆದ ನಂತರ ತಮಿಳುನಾಡಿನಿಂದ ವಿರೋಧ ವ್ಯಕ್ತವಾದರೂ ಕುಡಿಯುವ ನೀರಿಗೆ ಹೆಚ್ಚಿನ ಆದ್ಯತೆ ನೀಡಬೇಕಾ ದ್ದರಿಂದ ನೀರು ಬಳಕೆಗೆ ನಿರ್ಧಾರ ಕೈಗೊಂಡೆ.
ಹುಬ್ಬಳ್ಳಿ-ಧಾರವಾಡ ಸುತ್ತಮುತಲ ಪ್ರದೇಶದ ಕುಡಿ ಯುವ ನೀರು ಪೂರೈಕೆಗಾಗಿ ಕಳಸ ಬಂಡೂರಿ ಯೋಜನೆಗೆ ಮಹಾದಾಯಿಯಿಂದ 7 ಟಿಎಂಸಿ ನೀರು ಬಳಸಿಕೊಳ್ಳಲು ನೀವು ತೀರ್ಮಾನ ಕೈಗೊಳ್ಳಿ' ಎಂದು ಪ್ರಧಾನಿಯವರಿಗೆ ತಿಳಿಸಿದ್ದಾಗಿ ದೇವೇಗೌಡರು ವಿವರಿಸಿದರು. ಪ್ರಧಾನಿ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡರು, ``ಅವರಿಗೆ ಎಲ್ಲವನ್ನು ವಿವರಿಸಿದ್ದೇನೆ. ಲಿಖಿತ ಮನವಿಯನ್ನೂ ನೀಡಿದ್ದೇನೆ. ಚಳಿಗಾಲದ ಅಧಿವೇಶನದ ನಂತರ ಅವರು ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇದೆ'' ಎಂದರು.
ಮೋದಿ ಪರ ವಕಾಲತ್ತು: ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹಿನ್ನೆಲೆಯಲ್ಲಿ ಸಂಸತ್ತಿನ ಕಲಾಪಗಳಿಗೆ ಕಾಂಗ್ರೆಸ್ ಅಡ್ಡಿ ಮಾಡುತ್ತಿರುವುದನ್ನು ಆರೋಪಿಸಿದ ಗೌಡರು, ಸೋನಿಯಾಗಾಂಧಿ, ರಾಹುಲ್‍ಗಾಂಧಿ ಅವರನ್ನು ಹಾಜರಾಗುವಂತೆ ಹೇಳಿರುವುದು ನ್ಯಾಯಾಲಯವೇ ಹೊರತು ಮೋದಿ ಅವರಲ್ಲ ಎಂದರು. ಸಂಸತ್ತಿನ ವಿದ್ಯಾಮಾನಗಳಿಂದ ಮನಸ್ಸಿಗೆ ನೋವಾಗಿದೆ. ನಾನು ಪ್ರಧಾನಿಯಾಗಿದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಎಂದೂ ಈರೀತಿ ವರ್ತಿಸಿರಲಿಲ್ಲ ಎಂದರು. ``ನ್ಯಾಷನಲ್ ಹೆರಾಲ್ಡ್ ಪ್ರಕರಣದ ಬಗ್ಗೆ ಸುಬ್ರಮಣ್ಯನ್ ಸ್ವಾಮಿ 2013ರಲ್ಲಿ ನ್ಯಾಯಾಲಯದ ಕಟ್ಟೆ ಏರಿದ್ದಾರೆ. ಆಗ ಅವರು ಬಿಜೆಪಿ ಸೇರಿರಲಿಲ್ಲ. ಜನತಾ ಪಕ್ಷದಲ್ಲಿದ್ದರು. ಬಿಜೆಪಿಯೇ ಇದೆಲ್ಲವನ್ನು ಮಾಡಿ ಸುತ್ತಿದೆ ಎಂಬ ಮೊಂಡುವಾದ ಬಿಟ್ಟು ಕಾಂಗ್ರೆಸ್ ವಸ್ತುಸ್ಥಿತಿ ಅರ್ಥ ಮಾಡಿಕೊಳ್ಳಬೇಕು,'' ಎಂದರು. ``ಮೋದಿ ಅವರು ಸೋನಿಯಾಗಾಂಧಿ, ಮನಮೋಹನ್ ಸಿಂಗ್ ಅವರನ್ನೂ ಕರೆದು ಮಾತನಾಡಿದ್ದಾರೆ ಅವರು ತಮ್ಮ ಶಿಷ್ಟಾಚಾರ ಪಾಲಿಸಿದ್ದಾರೆ. ಅದಕ್ಕೆ ಕಾಂಗ್ರೆಸ್ ಪ್ರತಿಸ್ಪಂದಿಸಬೇಕು. ಆದರೆ, ಕಲಾಪಗಳಿಗೆ ಅಡ್ಡಿಪಡಿಸುತ್ತಿರುವುದು ಸರಿಯಲ್ಲ. ನನ್ನ ಅನುಭವದಲ್ಲಿ ಈ ರೀತಿ ಬೆಳವಣಿಗೆ ನೋಡಿಲ್ಲ ಎಂದರು.
Advertisement