ಕೋಲ್ಕತ್ತಾ: ಪ್ರತಿ ನಾಗರಿಕನೂ ಯಾವುದೇ ಭಯ ಮತ್ತು ಪೂರ್ವಗ್ರಹವಿಲ್ಲದೆ ನೆಮ್ಮದಿಯ ಜೀವನ ನಡೆಸುವುದು ಸಾಧ್ಯವಾದರೆ ದೇಶದ ಸಾಮಾಜಿಕ ಸಾಮರಸ್ಯ ಗಟ್ಟಿಯಾಗಿ ಉಳಿಯಲು ಸಾಧ್ಯ ಎನ್ನುವ ಮೂಲಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭಾರತೀಯ ಸಮಾಜದ ಬಹುತ್ವದ ಮಹತ್ವವನ್ನು ಪುನರುಚ್ಛರಿಸಿದ್ದಾರೆ.
ಸಹನೆ. ಸಹಬಾಳ್ವೆ ಹಾಗೂ ಭಿನ್ನ ಜೀವನ ಶೈಲಿ ಹಾಗೂ ಭಿನ್ನ ಅಭಿರುಚಿಗಳನ್ನು ಗೌರವಿಸುವುದು ನಮ್ಮ ಭಾರತೀಯತೆಯ ಅವಿಭಾಜ್ಯ ಲಕ್ಷಣಗಳು. ಜಾತಿ, ಮತ, ಧರ್ಮ, ಭಾಷೆ, ಪ್ರದೇಶಗಳ ಮಿತಿಗಳನ್ನು ಮೀರಿ ಎಲ್ಲ ಭಾರತೀಯರು ಸಹಜೀವನ ನಡೆಸುವುದು ಮುಖ್ಯ. ಆಗ ಮಾತ್ರ ಸಾಮಾಜಿಕ ಸಾಮರಸ್ಯ ಉಳಿಯಲಿದೆ ಎಂದು ಕೊಲ್ಕತ್ತಾ ಡಯೋಸಿಸ್‍ನ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅವರು ಹೇಳಿದ್ದಾರೆ.
ದಾದ್ರಿ ಘಟನೆ ಹಾಗೂ ದೇಶದಲ್ಲಿ ಕೇಳಿಬರುತ್ತಿರುವ ಅಸಹಿಷ್ಣುತೆಯ ವಿವಾದದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಕಳೆದ ಒಂದು ತಿಂಗಳಲ್ಲಿ ಎರಡನೇ ಬಾರಿ ದೇಶದ ಸಾಮರಸ್ಯದ ಬಗ್ಗೆ ಮಾತನಾಡಿರುವುದು ಗಮನಾರ್ಹ.