ವೆಚ್ಚ ಕಡಿತ ಇಲ್ಲದೇ ವಿತ್ತೀಯ ಕೊರತೆ ಗುರಿ ಸಾಧಿಸುತ್ತೇವೆ: ಅರುಣ್ ಜೇಟ್ಲಿ
ನವದೆಹಲಿ: ಪ್ರಸಕ್ತ ಸಾಲಿನಲ್ಲಿ ವೆಚ್ಚ ಕಡಿತ ಮಾಡದೇ ವಿತ್ತೀಯ ಕೊರತೆ ಗುರಿ ಸಾಧಿಸುವ ವಿಶ್ವಾಸವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ವ್ಯಕ್ತಪಡಿಸಿದ್ದಾರೆ.
ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರ ಪ್ರಶ್ನೆಗೆ ಉತ್ತರಿಸಿರುವ ಅರುಣ್ ಜೇಟ್ಲಿ, ವಿತ್ತೀಯ ಕೊರತೆಯನ್ನು ನೀಗಿಸಲು ನಿಗದಿಪಡಿಸಿರುವ ಗುರಿಯನ್ನು ಸರ್ಕಾರದ ಯೋಜಿತ ವೆಚ್ಚವನ್ನು ಕಡಿತ ಮಾಡದೇ ಸಾಧಿಸುವುದಾಗಿ ಅರುಣ್ ಜೆಟ್ಲಿ ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗುತ್ತಿರುವುದರಿಂದ ಸರ್ಕಾರಕ್ಕೆ ಉಂಟಾಗುತ್ತಿರುವ ಲಾಭವನ್ನು ಜನರಿಗೆ ತಲುಪಿಸಲಾಗುತ್ತಿಲ್ಲ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಆನಂದ್ ಶರ್ಮಾ ಆರೋಪಿಸಿದರು. ಆನಂದ್ ಶರ್ಮಾ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅರುಣ್ ಜೇಟ್ಲಿ, ತೈಲ ಬೆಲೆ ಕುಸಿತದ ಪ್ರಯೋಜನಗಳನ್ನು ಜನರಿಗೆ ತಲುಪಿಸಲಾಗುತ್ತಿದೆ. ಆದರೆ ಅಭಿವೃದ್ಧಿ ಕಾರ್ಯಗಳಿಗೂ ಹಣ ಅಗತ್ಯವಿದೆ ಎಂದು ಜೇಟ್ಲಿ ತಿಳಿಸಿದ್ದಾರೆ. ಪೆಟ್ರೋಲ್, ಡೀಸೆಲ್ ಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ಜನರು ನೀಡುತ್ತಿರುವ ತೆರಿಗೆಯ ಹಣವನ್ನು ವಿತ್ತೀಯಕೊರತೆ ನೀಗಿಸಲು ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಲಾಗುತ್ತಿದೆ ಎಂದು ಜೇಟ್ಲಿ ತಿಳಿಸಿದ್ದಾರೆ.
ತೈಲ ಬೆಲೆ ಕುಸಿತದಿಂದ ಉಂಟಾಗುತ್ತಿರುವ ಪ್ರಯೋಜನವನ್ನು ಮೂರು ರೀತಿಯಲ್ಲಿ ಬಳಕೆ ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ಪ್ರಯೋಜನಗಳನ್ನು ತಲುಪಿಸುವುದು ಸಹ ಇದರಲ್ಲಿ ಸೇರಿದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ