
ನವದೆಹಲಿ: ಕೇಂದ್ರ ಸಚಿವ ಅರುಣ್ ಜೇಟ್ಲಿ ವಿರುದ್ಧ ಆರೋಪ ಮುಂದುವರೆಸಿರುವ ದೆಹಲಿ ಆಮ್ ಆದ್ಮಿ ಪಕ್ಷ, ಅರುಣ್ ಜೇಟ್ಲಿ ಡಿಡಿಸಿಎ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆಪ್ ನಾಯಕರು ಆರೋಪಿಸಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಆಪ್ ನಾಯಕರು, ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಭ್ರಷ್ಟಾಚಾರ ನಡೆದಿದ್ದು ಅರುಣ್ ಜೇಟ್ಲಿ ಈ ಭ್ರಷ್ಟಾಚಾರದಲ್ಲಿ ಭಾಗಿಯಾಗಿದ್ದು ಕೇಂದ್ರ ಸರ್ಕಾರ ಅರುಣ್ ಜೇಟ್ಲಿ ರಾಜೀನಾಮೆ ಪಡೆಯಬೇಕು ಎಂದು ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಆಗ್ರಹಿಸಿದ್ದಾರೆ.
ಅರುಣ್ ಜೇಟ್ಲಿ ಡಿಡಿಸಿಎ ಅಧ್ಯಕ್ಷರಾಗಿದ್ದಾಗ ಕ್ರಿಕೆಟ್ ಸಂಸ್ಥೆಯನ್ನು ಖಾಸಗಿ ಕ್ಲಬ್ ನಂತೆ ನಡೆಸುತ್ತಿದ್ದರು. ಜೇಟ್ಲಿ ಅಧ್ಯಕ್ಷರಾಗಿದ್ದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲು 24 ಕೋಟಿ ರೂಪಾಯಿ ಬಜೆಟ್ ನ್ನು ಅನುಮೋದಿಸಲಾಗಿತ್ತು. ಆದರೆ ಸ್ಟೇಡಿಯಂ ನಿರ್ಮಾಣಕ್ಕೆ ಅನುಮೋದಿಸಲಾಗಿದ್ದ ವೆಚ್ಚಕ್ಕಿಂತ ಹೆಚ್ಚು ಖರ್ಚು ಮಾಡಲಾಗಿದ್ದು, ಒಟ್ಟು 114 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣ ಮಾಡಲಾಗಿದೆ ಎಂದು ಆಪ್ ನಾಯಕರು ಆರೋಪಿಸಿದಿದ್ದಾರೆ.
ಕೇಜ್ರಿವಾಲ್ ಅವರ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರ ಕಚೇರಿ ಮೇಲೆ ಸಿಬಿಐ ದಾಳಿ ನಡೆದಿದ್ದ ಹಿನ್ನೆಲೆಯಲ್ಲಿ ಆಪ್ ನಾಯಕರು ಅರುಣ್ ಜೇಟ್ಲಿ ಅವರನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸುತ್ತಿದ್ದು, ಡಿಡಿಸಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕಡತಗಳನ್ನು ಪಡೆಯಲು ಕೇಂದ್ರ ಸರ್ಕಾರ, ರಾಜೇಂದ್ರ ಕುಮಾರ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ ಎಂಬುದು ಆಪ್ ನಾಯಕರ ಆರೋಪವಾಗಿದೆ.
Advertisement