
ನವದೆಹಲಿ: ದೆಹಲಿ ಗ್ಯಾಂಗ್ ರೇಪ್ ನ ಬಾಲಾಪರಾಧಿ ಬಿಡುಗಡೆಗೆ ದೇಶಾದ್ಯಂತ ತೀವ್ರ ವಿರೋಧ ವ್ಯಕವಾಗಿರುವ ಪರಿಣಾಮ ರಾಜ್ಯಸಭೆಯಲ್ಲಿ ಬಾಕಿ ಇರುವ ಬಾಲಾಪರಾಧ ತಿದ್ದುಪಡಿ ಮಸೂದೆ ಬಗ್ಗೆ ಚರ್ಚಿಸಿ ಅಂಗೀಕರಿಸಲು ರಾಜ್ಯಸಭೆ ಒಪ್ಪಿಗೆ ಸೂಚಿಸಿದೆ.
ರಾಜ್ಯಸಭೆಯಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯ ಎಂಪಿ ಡೆರೆಕ್ ಓ ಬ್ರಿಯನ್ ಬಾಲಾಪರಾಧ ತಿದ್ದುಪಡಿ ಮಸೂದೆ ಬಗ್ಗೆ ಪ್ರಸ್ತಾಪಿಸಿದರು. ಈ ವೇಳೆ ರಾಜ್ಯಸಭೆಯ ಎಲ್ಲಾ ಸದಸ್ಯರು ತಿದ್ದುಪಡಿ ಮಸೂದೆಯನ್ನು ಚರ್ಚಿಸಿ ಅಂಗೀಕರಿಸುವುದಕ್ಕೆ ಒಪ್ಪಿಗೆ ಸೂಚಿಸಿದರು. ಚರ್ಚೆಯಾಗಬೇಕಿರುವ ವಿಷಯಗಳ ಪಟ್ಟಿಗೆ ಬಾಲಾಪರಾಧ ತಿದ್ದುಪಡಿ ಮಸೂದೆಯನ್ನೂ ಸಹ ಸೇರಿಸಲಾಗಿದ್ದು ತಿದ್ದುಪಡಿ ಕಾಯ್ದೆ ಶೀಘ್ರವೇ ಜಾರಿಯಾಗಬೇಕಿದೆ ಎಂದು ಎಲ್ಲಾ ಸದಸ್ಯರೂ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗದ ಅಧ್ಯಕ್ಷ ಸ್ವಾತಿ ಮಲಿವಾಲ್ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಅವರನ್ನು ಭೇಟಿ ಮಾಡಿದ್ದು ಇನ್ನು 3 ದಿನಗಳಲ್ಲಿ ಬಾಲಾಪರಾಧ ತಿದ್ದುಪಡಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆಗೊಳ್ಳುವಂತೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ.
ಇದೇ ವೇಳೆ, ನಿರ್ಭಯಾ ಪ್ರಕರಣದ ಬಾಲಾಪರಾಧಿ ಬಿಡುಗಡೆ ವಿರೋಧಿಸಿ ತಾವು ಸುಪ್ರೀಂಕೋರ್ಟ್ನ ರಜಾಕಾಲೀನ ಪೀಠಕ್ಕೆ ಸಲ್ಲಿಸಿರುವ ಮನವಿ ಕುರಿತ ವಿಚಾರಣೆ ವೇಳೆ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಬಾಲಪರಾಧ ತಿದ್ದುಪಡಿ ಮಸೂದೆ ಅಂಗೀಕರಿಸುವ ಕುರಿತಂತೆ ಸುಪ್ರೀಂಕೋರ್ಟ್ ಕೂಡ ಸಂಸತ್ ಸದಸ್ಯರಿಗೆ ಸೂಕ್ತ ನಿರ್ದೇಶನ ನೀಡುವ ಬಗ್ಗೆಯೂ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Advertisement