ನಾಳೆ ರಾಜ್ಯಸಭೆಯಲ್ಲಿ ಬಾಲಾಪರಾಧ ನ್ಯಾಯ ತಿದ್ದುಪಡಿ ಕಾಯ್ದೆ ಬಗ್ಗೆ ಚರ್ಚೆ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ 2014ರ...
ಸಂಸತ್
ಸಂಸತ್
Updated on

ನವದೆಹಲಿ: ನಿರ್ಭಯಾ  ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದ ನಂತರ 2014ರ ಬಾಲಾಪರಾಧ ನ್ಯಾಯ (ಮಕ್ಕಳ ಪಾಲನೆ ಮತ್ತು ರಕ್ಷಣೆ) ತಿದ್ದುಪಡಿ ಕಾಯಿದೆ  ಮಹತ್ವ ಪಡೆದುಕೊಂಡಿದ್ದು, ಮಂಗಳವಾರ ರಾಜ್ಯಸಭೆಯಲ್ಲಿ ಚರ್ಚೆಗೆ ಬರಲಿದೆ.

ನಾಳೆ ರಾಜ್ಯಸಭೆಯಲ್ಲಿ 267ನೇ ನಿಯಮದ ಪ್ರಕಾರ ಬಾಲಾಪರಾಧ ತಿದ್ದುಪಡಿ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳುವ ಬಗ್ಗೆ ಸರಕಾರಕ್ಕೆ ನೊಟೀಸ್‌ ನೀಡಲಾಗಿದೆ ಎಂದು ತೃಣಮೂಲ ಕಾಂಗ್ರೆಸ್‌ನ ಡೆರೆಕ್‌ ಓ ಬ್ರೈನ್‌ ಅವರು ತಿಳಿಸಿದ್ದಾರೆ.

ಬಾಲಾಪರಾಧಿಗಳು ರೇಪ್‌, ಕೊಲೆಯಂತಹ ಅತ್ಯಂತ ಅಮಾನುಷ ಮತ್ತು ಭೀಕರ ಅಪರಾಧಗಳನ್ನು ಎಸಗಿದ ಸಂದರ್ಭದಲ್ಲಿ ಅವರನ್ನು ಪ್ರಾಯಪ್ರಬುದ್ಧ ಅಪರಾಧಿಗಳಿಗೆ ಸಮಾನವಾದ ರೀತಿಯಲ್ಲಿ ಅತ್ಯಂತ ಕಠಿನ ಕಾನೂನುಗಳ ಪ್ರಕಾರ ಶಿಕ್ಷಿಸುವ ಬಾಲಪರಾಧ ತಿದ್ದುಪಡಿ ಮಸೂದೆಗೆ ನರೇಂದ್ರ ಮೋದಿ ಸರ್ಕಾರಕ್ಕೆ ಬಹುಮತವಿರುವ ಲೋಕಸಭೆಯಲ್ಲಿ ಈ ಹಿಂದೆಯೇ ಅಂಗೀಕಾರ ನೀಡಲಾಗಿದೆ. ಆದರೆ ರಾಜ್ಯಸಭೆಯಲ್ಲಿ ಬಹುಮತದ ಸಮಸ್ಯೆ ಎದುರಿಸುತ್ತಿರುವ ಮೋದಿ ಸರ್ಕಾರ ಬಾಲಪರಾಧ ಮಸೂದೆ ಅಂಗೀಕಾರ ಪಡೆಯುವಲ್ಲಿ ವಿಫಲವಾಗಿತ್ತು.

ಪ್ರತಿಪಕ್ಷ ಕಾಂಗ್ರೆಸ್‌ಗೆ ಬಹುಮತ ಇರುವ ರಾಜ್ಯಸಭೆಯಲ್ಲಿ ಜಿಎಸ್‌ಟಿ ಯಂತಹ ಇತರ ಹಲವು ಪ್ರಮುಖ ಕಾಯಿದೆಗಳ ಸಾಲಿನಲ್ಲಿ ಬಾಲಪರಾಧ ತಿದ್ದುಪಡಿ ಕಾಯಿದೆ ಕೂಡ ಅನುಮೋದನೆಯ ಭಾಗ್ಯ ಕಾಣದೆ ಕೊಳೆಯುತ್ತಿದೆ. ಹಾಗಾಗಿಯೇ ನಿರ್ಭಯಾ ರೇಪ್‌ - ಕೊಲೆ ಪ್ರಕರಣದ ಬಾಲಾಪರಾಧಿ, ಬಾಲರಾಕ್ಷಸನಿಗೆ ಕೇವಲ 3 ವರ್ಷಗಳ ಸುಧಾರಣಾ ಶಿಕ್ಷೆಯಾಗಿ, ಹೈಕೋರ್ಟ್‌, ಸುಪ್ರೀಂ ಕೋರ್ಟ್‌ಗಳಿಂದ ಆತನ ಬಂಧಮುಕ್ತಿಯನ್ನು ಕಾನೂನು ಪ್ರಕಾರವಾಗಿ ತಡೆಯಲು ಸಾಧ್ಯವಾಗಿಲ್ಲ ಎನ್ನುವುದು ಗಮನಾರ್ಹವಾಗಿದೆ.

ಇದೀಗ ಈ ಸಾಮಾಜಿಕ ಕಳಂಕಕ್ಕೆ ತಾನು ಗುರಿಯಾಗುವ ಭಯದಲ್ಲಿರುವ ಕಾಂಗ್ರೆಸ್‌ ನಾಳೆಯೇ ರಾಜ್ಯಸಭೆಯಲ್ಲಿ ಬಾಲಪರಾಧ ತಿದ್ದುಪಡಿ ಮಸೂದೆಯನ್ನು ಚರ್ಚೆಗೆ ಎತ್ತಿಕೊಳ್ಳಲು ನಿರ್ಧರಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com