ಬಸ್ ಓಡಿಸಿದ ಕಪಿಯ ಚೇಷ್ಟೆಗೆ ಜನ ದಿಕ್ಕಾಪಾಲು

ಉತ್ತರ ಪ್ರದೇಶದ ಬರೇಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಜನ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡತೊಡಗಿದರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬರೇಲಿ: ಉತ್ತರ ಪ್ರದೇಶದ ಬರೇಲಿಯ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ನೆರೆದಿದ್ದ ಜನ ಇದ್ದಕ್ಕಿದ್ದಂತೆ ದಿಕ್ಕಾಪಾಲಾಗಿ ಓಡತೊಡಗಿದರು. ಎಲ್ಲೆಲ್ಲೂ ಚೀರಾಟ, ನೂಕಾಟ, ತಳ್ಳಾಟ, ಎಲ್ಲರೂ ಜೀವ ಉಳಿಸಿಕೊಳ್ಳುವ ಧಾವಂತದಲ್ಲಿ ಕಂಡ ಕಂಡ ಕಡೆ ನುಗ್ಗ ತೊಡಗಿದರು. ಏನೋ ಅನಾಹುತ ನಡೆದು ಬಿಟ್ಟಿದೆ ಎಂಬಷ್ಟರಲ್ಲಿ, ಎಲ್ಲವೂ ಮುಗಿದು, ಪರಿಸ್ಥಿತಿ ಒಂದು ಹಂತಕ್ಕೆ ಬಂದಿತು. 
ಅಲ್ಲಿ ಬಾಂಬ್ ದಾಳಿಯೇನೂ ಆಗಿರಲಿಲ್ಲ, ಸ್ಫೋಟವೂ ಸಂಭವಿಸಿರಲಿಲ್ಲ. ನಡೆದದ್ದು ಕಪಿಚೇಷ್ಟೆ ಅಷ್ಟಕ್ಕೂ ನಡೆದದ್ದೇನೆಂದರೆ; ಸೋಮವಾರ ಮಧ್ಯಾಹ್ನ ಫಿಲಿಬಿತ್‍ಗೆ ಹೊರಡಬೇಕಿದ್ದ ಬಸ್, ಪ್ರಯಾಣಿಕರಿಗಾಗಿ ಕಾಯುತ್ತಾ ನಿಲ್ದಾಣದಲ್ಲಿ ನಿಂತಿತ್ತು. ಹೊರಡಲು ಇನ್ನೂ ಅರ್ಧ ಗಂಟೆ ಸಮಯವಿದ್ದಿದ್ದರಿಂದ ಕಂಡಕ್ಟರ್ ಕೆಳಗಿಳಿದು ಹೋಗಿದ್ದರೆ, ಡ್ರೈವರ್ ಹಿಂದಿನ ಸೀಟಿನಲ್ಲಿ ಸಣ್ಣ ನಿದ್ರೆಗೆ ಜಾರಿದ್ದ. 
ಅಷ್ಟರಲ್ಲೇ ಡ್ರೈವರ್ ಸೀಟಿನ ಬಳಿ ಕಿಟಕಿಯಿಂದ ಒಳನುಗ್ಗಿದ ಕೋತಿಯೊಂದು ಸ್ಟೇರಿಂಗ್ ಹಿಡಿದು ಆಟವಾಡತೊಡಗಿತ್ತು. ಡ್ರೈವರ್ ಕೀಯನ್ನು ಇಗ್ನಿಷನ್‍ನಲ್ಲೇ ಬಿಟ್ಟಿದ್ದರಿಂದ ಕೋತಿ ಅದನ್ನು ತಿರುವಿದ್ದೇ ಇನ್ನಿಲ್ಲದ ಎಡವಟ್ಟುಗಳಿಗೆ ಕಾರಣವಾಯಿತು. ಈ ಬಗ್ಗೆ `ದ ಟೈಮ್ಸ್ ಆಫ್  ಇಂಡಿಯಾ' ವರದಿ ಮಾಡಿದೆ. 
ಬಸ್ ಎಂಜಿನ್ ಚಾಲನೆಗೊಳ್ಳುತ್ತಿದ್ದಂತೆ ಗಾಬರಿಗೊಂಡ ಕೋತಿ, ಪಕ್ಕದ ಗೇರ್ ಅದುಮಿದೆ. ಸರಿ ಬಸ್ 2ನೇ ಗೇರ್ ನಲ್ಲಿ ರಭಸವಾಗಿ ಮುಂದೆ ನುಗ್ಗತೊಡಗಿದೆ. ಈ ರಭಸಕ್ಕೆ ನಿದ್ದೆಗೆ ಜಾರಿದ್ದ ಡ್ರೈವರ್ ಸೀಟಿನಿಂದ ಕೆಳಗುರುಳಿದ್ದಾನೆ. ಆಗ ಆತನಿಗೆ ಚೇಷ್ಟೆ ಅರಿವಿಗೆ ಬಂದಿದೆ. ಕೋತಿ ಸ್ಟೇರಿಂಗ್ ಮೇಲೆ ಆಡವಾಡುತ್ತಿದ್ದರೆ, ಬಸ್ ಅಡ್ಡಾದಿಡ್ಡಿ ಓಡುತ್ತಿದೆ. 
ಕೆಳಗಿದ್ದ ನೂರಾರು ಮಂದಿ ಚಾಲಕನೇ ಇಲ್ಲದೆ ಬಸ್ ನುಗ್ಗಿ ಬರುತ್ತಿರುವುದನ್ನು ಕಂಡು ಹೌಹಾರಿ ಕಕ್ಕಾಬಿಕ್ಕಿಯಾಗಿದ್ದಾರೆ. ಜೀವ ಉಳಿಸಿಕೊಳ್ಳಲು ಜನ ದಿಕ್ಕಾಪಾಲಾಗಿ ಓಡುತ್ತಿದ್ದರೆ, ಒಳಗೆ ಡ್ರೈವರ್ ಕೋತಿಯನ್ನು ಓಡಿಸಿ, ಸ್ಟೇರಿಂಗ್ ಹಿಡಿದು, ಕ್ಲಚ್ ಅಮುಕಿ, ಗೇರ್ ಬದ ಲಿಸಿ ಬಸ್ ನಿಲ್ಲಿಸುವ ಸಾಹಸ ಮಾಡುತ್ತಿರುವಷ್ಟರಲ್ಲೇ ಅನಾಹುತ ಆಗಿ ಹೋಗಿತ್ತು. 
ನಿಲ್ದಾಣದಲ್ಲಿ ನಿಂತಿದ್ದ 2 ಬಸ್ ಗಳಿಗೆ ಗುದ್ದಿದ ಬಸ್, ಅಂತೂ ಡ್ರೈವರ್ ಹಿಡಿತಕ್ಕೆ ಬಂದಿತ್ತು.
ನಿಲ್ದಾಣದಲ್ಲಿ ಮಂಗನ ಕಾಟ ಅತಿಯಾಗಿದ್ದು, ಸೀಟು ಹರಿದುಹಾಕುವುದು, ಸಿಸಿಟಿವಿ ಹಾಳು ಮಾಡುವುದು ಮುಂತಾದ ಕಪಿಚೇಷ್ಟೆ ಮಾಡಿದ್ದವು. ಇದೀಗ ಈ ಅನಾಹುತ ನಡೆದಿದೆ. ಸದ್ಯ ಯಾವುದೇ ಸಾವು-ನೋವು ಆಗಿಲ್ಲ ಎಂಬುದಷ್ಟೇ ಸಮಾಧಾನ ಎಂದು ಬಸ್ ಡಿಪೋ ಮ್ಯಾನೇಜರ್ ಎಸ್ ಕೆ ಶರ್ಮಾ ನಿಟ್ಟುಸಿರು ಬಿಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com