ಕೀಳು ಮಟ್ಟದ ಹೇಳಿಕೆ ನೀಡುವ ಹಕ್ಕು ಕೇಜ್ರಿವಾಲ್, ಎಎಪಿ ನಾಯಕರಿಗಿಲ್ಲ: ಜೇಟ್ಲಿ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ...
ಅರುಣ್ ಜೇಟ್ಲಿ - ಅರವಿಂದ್ ಕೇಜ್ರಿವಾಲ್
ಅರುಣ್ ಜೇಟ್ಲಿ - ಅರವಿಂದ್ ಕೇಜ್ರಿವಾಲ್
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ವಿತ್ತ ಸಚಿವ ಅರುಣ್ ಜೇಟ್ಲಿ ಅವರು, ಜನ ಕೀಳು ಮಟ್ಟದ ಹೇಳಿಕೆಗಳನ್ನು ನೀಡುವ ಹಕ್ಕು ಎಎಪಿ ನಾಯಕರಿಗೆ ನೀಡಿಲ್ಲ ಎಂದಿದ್ದಾರೆ.
ದೆಹಲಿ ವಿಧಾಸಭೆ ಚುನಾವಣೆ ಯಶಸ್ಸಿನಿಂದ ಬೀಗುತ್ತಿರುವ ಆಮ್ ಆದ್ಮಿ ಪಕ್ಷ, ಕೀಳುತನ ಮತ ತಂದು ಕೊಡುತ್ತೆ ಎಂದು ಕಾಂಗ್ರೆಸ್ ಪಕ್ಷಕ್ಕೆ ತಪ್ಪು ಮಾಹಿತಿ ನೀಡುತ್ತಿದೆ ಎಂದಿದ್ದಾರೆ.
'ದೆಹಲಿ ಮುಖ್ಯಮಂತ್ರಿ ಪ್ರಧಾನಿ ಬಗ್ಗೆ ದೆಹಲಿ ವಿಧಾನಸಭೆ ಮತ್ತು ಹೊರಗೆ ನೀಡಿದ ಹೇಳಿಕೆಗಳು ಏನು? ಉನ್ನತ ಹುದ್ದೆಯಲ್ಲಿರುವ ವ್ಯಕ್ತಿ ಬಳಸುವ ಭಾಷೆ ಇದೇನಾ? ಒಂದು ವೇಳೆ ಇಂತಹ ಭಾಷೆಯನ್ನು ಭಾರತ ಸರ್ಕಾರ ಬಳಸಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿತ್ತು' ಎಂದು ಜೇಟ್ಲಿ ಹೇಳಿದ್ದಾರೆ.
'ಎಎಪಿ ನಾಯಕರು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳಬೇಕು. ಸಾಮಾನ್ಯ ಜನರಂತೆ ನಡೆದುಕೊಳ್ಳಬಾರದು. ಅಸಭ್ಯವಾಗಿ ವರ್ತಿಸುವ ಹಕ್ಕು ಅವರಿಗಿಲ್ಲ. ರಾಜಕೀಯದಲ್ಲಿ ಕೀಳುಮಟ್ಟದ ಭಾಷೆ ಬಳಸಬಾರದು ಎಂದಿರುವ ಜೇಟ್ಲಿ, ಅಸಭ್ಯವಾಗಿ ಸುಳ್ಳು ಹೇಳುವುದರಿಂದ ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ' ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅಲ್ಲದೆ ಅಸಭ್ಯತೆ ಭಾರತೀಯ ರಾಜಕೀಯದ ಹೊಸ ರೂಪವೇ? ಎಂದು ಪ್ರಶ್ನಿಸಿದ್ದಾರೆ.
ತಮ್ಮ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿದ್ದರಿಂದ ಕೆಂಡಾಮಂಡಲವಾಗಿದ್ದ ಕೇಜ್ರಿವಾಲ್ ಪ್ರಧಾನಿ ನರೇಂದ್ರ ಮೋದಿ ಒಬ್ಬ ಹೇಡಿ ಹಾಗೂ ಸೈಕೋಪಾತ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ವಿಧಾನಸಭೆಯಲ್ಲೂ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದ ದೆಹಲಿ ಸಿಎಂ, ಮೋದಿಗೆ ಧೈರ್ಯವಿದ್ದರೆ ಜೇಟ್ಲಿಯನ್ನು ವಜಾಗೊಳಿಸಲಿ ಎಂದು ಸವಾಲು ಹಾಕಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com