ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್

ಸಂಚಾರ ಸೂತ್ರ ಸಿಎಂಗೂ ಲಾಗು

ಅಪಾಯಮಟ್ಟ ಮೀರಿರುವ ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಕೈಗೊಂಡಿರುವ ಪ್ರಾಯೋಗಿಕ ಸಮ ಬೆಸಸಂಖ್ಯೆ...
Published on
ನವದೆಹಲಿ: ಅಪಾಯಮಟ್ಟ ಮೀರಿರುವ ವಾಯುಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಕೈಗೊಂಡಿರುವ ಪ್ರಾಯೋಗಿಕ ಸಮ ಬೆಸಸಂಖ್ಯೆ ಸಂಚಾರ ಸೂತ್ರ ಜ.1ರಿಂದ 15ರವರೆಗೆ ಪ್ರಾಯೋಗಿಕವಾಗಿ ಜಾರಿಯಾಗಲಿದೆ. 
ಅಗತ್ಯ ವಸ್ತು ಸಾಗಣೆ ವಾಹನ, ಪೊಲೀಸ್, ಆ್ಯಂಬ್ಯುಲೆನ್ಸ್, ಸಿಎನ್‍ಜಿ ಮತ್ತು ಹೈಬ್ರಿಡ್ ಕಾರುಗಳು ಅಗ್ನಿಶಾಮಕ ವಾಹನ, ಮಹಿಳೆಯರೇ ಡ್ರೈವ್ ಮಾಡುವ ಕಾರು ಹಾಗೂ ವಿಐಪಿಗಳಿಗೆ ವಿನಾಯಿತಿ ನೀಡಲಾಗಿದೆ. ವಿಶೇಷವೆಂದರೆ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ವಿವಿಐಪಿ ಪಟ್ಟಿಯಲ್ಲಿದ್ದರೂ ಸಮ ಬೆಸಸಂಖ್ಯೆ ಸಂಚಾರ ಸೂತ್ರದಿಂದ ವಿನಾಯಿತಿ ಪಡೆದಿಲ್ಲ. 
ತಮ್ಮ ಶಾಸಕರಿಗೂ ಅದೇ ನಿಯಮ ಅನುಸರಿಸಿದ್ದಾರೆ. ಗುರುವಾರ ಪ್ರಾಯೋಗಿಕ ಸಮಬೆಸ ಸಂಚಾರ ಸೂತ್ರದ ಕಾರ್ಯಸೂಚಿ ಪ್ರಕಟಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈ ವ್ಯವಸ್ಥೆಯನ್ನು ಜ.15ರ ನಂತರ ಮುಂದುವರಿಸುವ ಉದ್ದೇಶ ತಮಗೆ ಇಲ್ಲ ಎಂದು ಸ್ಪಷ್ಟಪಡಿಸಿದರು. 
``ಪರಿಸರ ಮಾಲಿನ್ಯ ಎಚ್ಚರಿಕೆಯ ಮಟ್ಟ ತಲುಪಿದಾಗ ಮಾಲಿನ್ಯ ನಿಯಂತ್ರಿಸಲು ಸಮಬೆಸ ಸಂಖ್ಯೆ ಸಂಚಾರ ಸೂತ್ರವನ್ನು ಬಹುತೇಕ ಮುಂದುವರಿದ ದೇಶಗಳು ಅನುಸರಿಸುತ್ತವೆ. ಜ.15ರ ನಂತರ ನಾವು ಪರಿಸರ ಮಾಲಿನ್ಯದ ಮಟ್ಟವನ್ನು ಪರಾಮರ್ಶಿಸುತ್ತೇವೆ. ಜನರು ಬಯಸಿದರೆ, ಈ ವ್ಯವಸ್ಥೆಯನ್ನು ದೊಡ್ಡ ಪ್ರಮಾಣದಲ್ಲಿ ಜಾರಿ ಮಾಡುತ್ತೇವೆ. 
ಅದಕ್ಕೂ ಮಿಗಿಲಾಗಿ ಪರಿಸರ ಮಾಲಿನ್ಯ ತಡೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು'' ಎಂದರು ಮುಖ್ಯಮಂತ್ರಿ ಕೇಜ್ರಿವಾಲ್. ಸಮಬೆಸ ಸಂಖ್ಯೆ ಸಂಚಾರ ಸೂತ್ರ ಬೆಳಗ್ಗೆ 8ರಿಂದ ರಾತ್ರಿ 8ಗಂಟೆವರೆಗೆ ಜಾರಿಯಲ್ಲಿರುತ್ತದೆ. ಉಲ್ಲಂಘನೆ ಮಾಡಿದವರಿಗೆ ರು.2 ಸಾವಿರ ದಂಡ ವಿಧಿಸಲಾಗುತ್ತದೆ. ಭಾನುವಾರ ಮುಕ್ತ ಸಂಚಾರ ಇರುತ್ತದೆ. 
ಹೊಸ ವ್ಯವಸ್ಥೆ ಜಾರಿ ಸುಗಮವಾಗಲು ಮತ್ತು ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಹೆಚ್ಚು 6 ಸಾವಿರ ಹೆಚ್ಚುವರಿ ಸಾರ್ವಜನಿಕ ವಾಹನ ಸಂಚಾರ ವ್ಯವಸ್ಥೆ ಮಾಡಲಾಗುತ್ತದೆ. ಮೆಟ್ರೋ ಸಂಚಾರವನ್ನು ಹೆಚ್ಚಿಸಲಾಗುತ್ತದೆ. ಕಾರ್ಪೂಲಿಂಗ್‍ಗಾಗಿ ಆ್ಯಪ್ ಸಿದ್ಧಪಡಿಸಲಾಗುತ್ತದೆ ಎಂದು ತಿಳಿಸಿದರು ದೆಹಲಿ ಮುಖ್ಯಮಂತ್ರಿ. ಹೊಸ ವ್ಯವಸ್ಥೆ ಜಾರಿಯಿಂದಾಗಿ ಸುಮಾರು 10 ಲಕ್ಷ ಕಾರುಗಳು ರಸ್ತೆಯಿಂದ ಹೊರಗೆಉಳಿಯಲಿವೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com