ಸಂಸದರ ಮಾಸಿಕ ವೇತನ ರು.2.8 ಲಕ್ಷ?

ಕೇಂದ್ರ ಸರ್ಕಾರವು ಸಂಸದರ ವೇತನ, ಭತ್ಯೆಯಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ. ಈ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ, ಸಂಸದರ...
ಸಂಸತ್
ಸಂಸತ್
ನವದೆಹಲಿ: ಕೇಂದ್ರ ಸರ್ಕಾರವು ಸಂಸದರ ವೇತನ, ಭತ್ಯೆಯಲ್ಲಿ ಏರಿಕೆ ಮಾಡಲು ಚಿಂತನೆ ನಡೆಸಿದೆ. ಈ ಪ್ರಸ್ತಾಪಕ್ಕೆ ಹಣಕಾಸು ಸಚಿವಾಲಯದ ಒಪ್ಪಿಗೆ ಸಿಕ್ಕಿದ್ದೇ ಆದಲ್ಲಿ, ಸಂಸದರ ವೇತನ ತಿಂಗಳಿಗೆ ರು. 2.8 ಲಕ್ಷಕ್ಕೇರಲಿದೆ. ಅಷ್ಟೇ ಅಲ್ಲ, ಪಿಂಚಣಿಯಲ್ಲೂ ಭರ್ಜರಿ ಏರಿಕೆಯಾಗಲಿದೆ. 
ಸಂಸದರ ಮಾಸಿಕ ವೇತನವನ್ನು ಈಗಿರುವ ರು. 50 ಸಾವಿರದಿಂದ ರು. 1 ಲಕ್ಷಕ್ಕೇರಿಸುವ, ಕ್ಷೇತ್ರ ಭತ್ಯೆಯನ್ನು ರು. 45 ಸಾವಿರದಿಂದ ರು. 90 ಸಾವಿರಕ್ಕೇರಿಸುವ ಹಾಗೂ ಕಚೇರಿ ಭತ್ಯೆ, ಕಾರ್ಯದರ್ಶಿ ಭತ್ಯೆಯನ್ನು ರು. 45 ಸಾವಿರದಿಂದ ರು. 90 ಸಾವಿರಕ್ಕೇರಿಸುವ ಪ್ರಸ್ತಾಪವು ಈಗ ವಿತ್ತ ಸಚಿವಾಲಯದ ಅಂಗೀಕಾರಕ್ಕೆ ಕಾಯುತ್ತಿದೆ. ಜತೆಗೆ, ಇದೇ ಪ್ರಸ್ತಾಪದಲ್ಲಿ ಮಾಸಿಕ ಮೂಲ ಪಿಂಚಣಿಯನ್ನು ರು. 20 ಸಾವಿರದಿಂದ ರು. 35 ಸಾವಿರಕ್ಕೇರಿಸುವ ಅಂಶವೂ ಸೇರಿದೆ. 
ಒಪ್ಪಿಗೆ ಸಿಕ್ಕರೆ ತಿದ್ದುಪಡಿ: 5ಕ್ಕಿಂತ ಹೆಚ್ಚು ವರ್ಷ ಸೇವೆ ಸಲ್ಲಿಸಿದ ಸಂಸದರು, ಅವರು ಕಾರ್ಯ ನಿರ್ವಹಿಸಿದ ಪ್ರತಿ ವರ್ಷಕ್ಕೆ ರು.2 ಸಾವಿರದಂತೆ ಹೆಚ್ಚುವರಿ ಮೊತ್ತವನ್ನು ಪಡೆಯಲಿದ್ದಾರೆ. ಸದ್ಯ ಇದು ಕಾರ್ಯನಿರ್ವಹಿಸಿದ ಪ್ರತಿ ಹೆಚ್ಚುವರಿ ವರ್ಷಕ್ಕೆ ರು. 1,500 ಅನ್ನು ನೀಡಲಾಗುತ್ತಿದೆ. 
ಹಣಕಾಸು ಬಿಡುಗಡೆ ಮಾಡಲು ಸಚಿವಾಲಯವು ಒಪ್ಪಿಗೆ ನೀಡಿದರೆ, ಸಂಸತ್ ನಲ್ಲಿ ಸದಸ್ಯರ ವೇತನ, ಭತ್ಯೆ ಮತ್ತು ಪಿಂಚಣಿ ವಿಧೇಯಕಕ್ಕೆ ತಿದ್ದುಪಡಿ ತರಲಾಗುತ್ತದೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ. ಸಚಿವಾಲಯವು ಈ ಪ್ರಸ್ವಾಪಕ್ಕೆ ಒಪ್ಪಿಗೆ ನೀಡುವುದು ಬಹುತೇಕ ಖಚಿತ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕಳೆದ ಬಜೆಟ್ ನಲ್ಲಿ ವಿತ್ತ ಸಚಿವಾಲಯವು ಸಂಸದರಿಗೆ ರು. 295.25 ಕೋಟಿ, ರಾಜ್ಯಸಭೆ ಸದಸ್ಯರಿಗೆ ರು.121.96 ಕೋಟಿ(ಪ್ರಯಾಣ ಮತ್ತಿತರ ಖರ್ಚು ಸೇರಿ)ಯನ್ನು ಮೀಸಲಿಟ್ಟಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com