ಪಾಕಿಸ್ತಾನಕ್ಕಾಗಿ ಗೂಢಚರ್ಯೆ; ಬಂಧಿತ ರಂಜಿತ್‌ನಿಂದ ಸಿಕ್ಕಿದ ಮಾಹಿತಿಗಳೇನು?

ಪಾಕಿಸ್ತಾನಕ್ಕಾಗಿ ಗೂಢಚರ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಾಯುಸೇನೆಯಿಂದ ವಜಾಗೊಂಡಿರುವ ರಂಜಿತ್ ನಿಂದ ಹಲವಾರು ಮಾಹಿತಿಗಳು...
ರಂಜಿತ್  (ಕೃಪೆ: ಪಿಟಿಐ)
ರಂಜಿತ್ (ಕೃಪೆ: ಪಿಟಿಐ)
ನವದೆಹಲಿ: ಪಾಕಿಸ್ತಾನಕ್ಕಾಗಿ ಗೂಢಚರ್ಯೆ ಮಾಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ವಾಯುಸೇನೆಯಿಂದ ವಜಾಗೊಂಡಿರುವ ರಂಜಿತ್ ನಿಂದ ಹಲವಾರು ಮಾಹಿತಿಗಳು ಬಹಿರಂಗವಾಗಿವೆ. ಪಾಕಿಸ್ತಾನದ ಐಎಸ್‌ಐಯೊಂದಿಗೆ ಈತ ಹಲವಾರು ರಹಸ್ಯ ಮಾಹಿತಿಗಳನ್ನು ಹಂಚಿಕೊಂಡಿದ್ದಾನೆ. ಆದರೆ ರಂಜಿತ್‌ಗೆ ಇದೊಂದು ವ್ಯವಸ್ಥಿತ ಜಾಲ ಎಂಬುದು ಗೊತ್ತಾಗಲೇ ಇಲ್ಲ. 
ಬಂಧಿತನಾಗುವ ವರೆಗೂ ಪ್ರಧಾನ ಏರ್ ಕ್ರಾಫ್ಟ್ಸ್‌ಮೆನ್ ಕೆಕೆ ರಂಜಿತ್‌ಗೆ ತಾನು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಕಳುಹಿಸಿಕೊಡುತ್ತಿದ್ದೇನೆ ಎಂಬುದರ ಅರಿವೆಯೇ ಇರಲಿಲ್ಲ.
ಪಾಕಿಸ್ತಾನದ ಐಎಸ್‌ಐ ಜತೆ ತಾನು ಲಿಂಕ್ ಹೊಂದಿದ್ದೇನೆ ಎಂಬುದರ ಬಗ್ಗೆ ಅರಿವು ಇಲ್ಲದೇ ಇರುವ ಕಾರಣ ವರ್ಷಗಳ ಕಾಲ ರಂಜಿತ್ ಕೆಲಸ ಮಾಡಿದ್ದಾನೆ.
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿಯ ಪ್ರಕಾರ ರಂಜಿತ್‌ಗೆ  ಫೇಸ್‌ಬುಕ್ ಮೂಲಕ ದಾಮಿನಿ ಮೇನಟ್  (Damini McNaught) ಎಂಬಾಕೆ ಪರಿಚಯವಾಗಿದ್ದಾಳೆ.  ಯುನಿಫಾರ್ಮ್‌ನಲ್ಲಿದ್ದ ಫೋಟೋವೊಂದನ್ನು ಫೇಸ್‌ಬುಕ್ ಪ್ರೊಫೈಲ್ ಫೋಟೋ ಮಾಡಿಕೊಂಡ ಕೂಡಲೇ ಈ ಮಹಿಳೆಯ ಫ್ರೆಂಡ್ ರಿಕ್ವೆಸ್ಟ್ ಬಂದಿದೆ. ಇವರಿಬ್ಬರೂ ಫೇಸ್‌ಬುಕ್ ಮೆಸೆಂಜರ್‌ನಲ್ಲಿ ಚಾಟ್ ಮಾಡಿದ್ದು, ಇಮೇಲ್, ಫೋನ್‌ನಲ್ಲಿಯೂ ಸಂಭಾಷಣೆ ನಡೆದಿದೆ. ಮೇನಟ್ ತಮ್ಮ ಫೇಸ್‌ಬುಕ್‌ನಲ್ಲಿ ಬ್ರಿಟನ್‌ನ ಖ್ಯಾತ ಪತ್ರಿಕೆಯ ಸಂಪಾದಕಿ ಎಂದು ಹೇಳಿಕೊಂಡಿದ್ದು, ತಮ್ಮ ಪತ್ರಿಕೆಯಲ್ಲಿ ಭದ್ರತಾ ವಿಶ್ಲೇಷಣಾಕಾರನಾಗಿ ಕೆಲಸ ಮಾಡುವಂತೆ ಕೇಳಿಕೊಂಡಿದ್ದಾಳೆ. ಇದಕ್ಕಾಗಿ ರಂಜಿತ್‌ಗೆ ಕೈ ತುಂಬಾ ಸಂಬಳ ನೀಡಲಾಗಿತ್ತು
ತದನಂತರ ಮೇನಟ್ ರಂಜಿತ್‌ಗೆ ವಾಕಕ್ಕೊಂದು ಕೆಲಸ ವಹಿಸಿಕೊಡುತ್ತಿದ್ದಳು. ಆಕೆ ಆತನಿಗೆ  ಬಟಿಂಡಾದ ಗೂಗಲ್ ಸ್ಯಾಟಲೈಟ್ ಮ್ಯಾಪ್ ಕಳುಹಿಸಿಕೊಟ್ಟು ಅದರಲ್ಲಿರುವ ವಾಯುನೆಲೆ, ಪ್ರಧಾನ ಕಟ್ಟಡಗಳು ಯಾವುದು ಎಂಬುದನ್ನು ಗುರುತು ಮಾಡುವಂತೆ ಹೇಳಿದ್ದಳು. ಇನ್ನೊಂದು ಮ್ಯಾಪ್ ಕಳುಹಿಸಿ ಅಲ್ಲಿರುವ ಏರ್ ಟ್ರಾಫಿಕ್ ಕಂಟ್ರೋಲ್, ವಾಯು ನೆಲೆ ಮತ್ತು ಫೈಟರ್ ವಿಮಾನಗಳ ಪಾರ್ಕಿಂಗ್ ಜಾಗದ ಬಗ್ಗೆ ಗುರುತು ಮಾಡಿಕೊಡುವಂತೆ ಹೇಳಿದ್ದಳು. ಇಷ್ಟೇ ಅಲ್ಲದೆ ಎಲ್ಲ ಫೈಟರ್ ವಿಮಾನಗಳ ರನ್‌ವೇಯಿಂದ ಹಿಡಿದು ಟೇಕಾಫ್ ಆಗುವ ಜಾಗಗಳನ್ನೂ ಗುರುತಿಸುವಂತೆ ಹೇಳಿದ್ದಳು.
ಆದರೆ ರಹಸ್ಯ ದಾಖಲೆಗಳನ್ನಾಗಲೀ, ಯೋಜನೆಯನ್ನಾಗಲೀ ಬಹಿರಂಗ ಪಡಿಸುವಂತೆ ರಂಜಿತ್ ನಲ್ಲಿ ಆಕೆ ಹೇಳಲಿಲ್ಲ.
ಭದ್ರತಾ ವಿಶ್ಲೇಷಣಾಕಾರನಾಗಿದ್ದ ರಂಜಿತ್ ವಾಯುನೆಲೆಯ ಪ್ರವೇಶ ಮತ್ತು ಹೊರಗೆ ಹೋಗುವ ಜಾಗ, ವಿಮಾನಗಳನ್ನು ನಿಯೋಜಿಸಿರುವ ಸ್ಥಳ ಎಲ್ಲವನ್ನೂ ಗುರುತು ಮಾಡಿಕೊಟ್ಟಿದ್ದ. ಈ ಕೆಲಸ ಮಾಡಿದ್ದಕ್ಕಾಗಿ ಈತನಿಗೆ 30,000 ದಿಂದ 35,000 ಸಂಬಳ ನೀಡಲಾಗಿತ್ತು.
ಇದೀಗ ರಂಜಿತ್‌ನ ಜತೆಗೆ ಇನ್ನಿತರ ಭದ್ರತಾ ಅಧಿಕಾರಿಗಳು ಈ ಜಾಲದಲ್ಲಿ ಸಿಕ್ಕಿ ಹಾಕಿಕೊಂದ್ದಾರೆಯೇ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ರಂಜಿತ್ ಬಗ್ಗೆ ಮಾಹಿತಿ ಸಿಕ್ಕ ಹಿನ್ನಲೆಯಲ್ಲಿ ದೆಹಲಿ ಪೊಲೀಸರ ವಿಶೇಷ ಪಡೆ, ಐಎಎಫ್ ಎಲ್ ಯು ಮತ್ತು ಮಿಲಿಟರಿ ಇಂಟೆಲಿಜೆನ್ಸ್ ಮಂಗಳವಾರ ಆತನನ್ನು ಬಂಧಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com