

ಚಂಡೀಗಢ: ಉದ್ಯಾನ ನಗರಿ ಎಂದು ಕರೆಯಲ್ಪಡುವ ಚಂಡೀಗಢ ನಗರದ ಕಿರೀಟಕ್ಕೆ ಇನ್ನೊಂದು ಗರಿ ಮೂಡಿದೆ. ಇಡೀ ವಿಶ್ವದಲ್ಲಿ ಚಂಡೀಗಢ ನಗರವೊಂದೇ ಪರಿಪೂರ್ಣ ನಗರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ವಿಶ್ವದ ಆದರ್ಶ ನಗರಗಳಲ್ಲಿ ಚಂಡೀಗಢ ನಗರ ಅದ್ಭುತ ಸಾಧನೆ ಮಾಡಿದೆ. ಇಲ್ಲಿ ಆಕರ್ಷಣೀಯ ಸ್ಮಾರಕಗಳಿವೆ. ಭಾರತದ ಇತರ ನಗರಗಳಿಗೆ ಹೋಲಿಸಿದರೆ ಇಲ್ಲಿ ಮರಗಳ ಸಂಖ್ಯೆ ಹೆಚ್ಚಾಗಿದೆ. ಸಾಂಪ್ರದಾಯಿಕತೆಯಿಂದ ಸಮ್ಮಿಶ್ರಣಗೊಂಡ ಆಧುನಿಕತೆ ಈ ನಗರದಲ್ಲಿದೆ ಎಂದು ಬಿಬಿಸಿ ಸುದ್ದಿ ವಾಹಿನಿಯ ಜೊನಾತನ್ ಗ್ಲಾನ್ಸಿ ಹೇಳಿದ್ದಾರೆ.
ಯೋಜನಾಬದ್ಧವಾಗಿ ಚಂಡೀಗಢ ನಗರವನ್ನು ನಿರ್ಮಿಸಲಾಗಿದ್ದು, ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳ ರಾಜಧಾನಿಯಾಗಿದೆ. ಅಲ್ಲದೆ ಭಾರತದಲ್ಲಿಯೇ ಸಂಪದ್ಭರಿತ ನಗರವಾಗಿದೆ ಎಂದು ಸರ್ಕಾರದ ವೆಬ್ ಸೈಟ್ ತಿಳಿಸಿದೆ.ಶಿವಾಲಿಕ ಬೆಟ್ಟದ ತಪ್ಪಲಿನಲ್ಲಿರುವ ಚಂಡೀಗಢ ನಗರವನ್ನು ಫ್ರಾನ್ಸ್ ನ ಖ್ಯಾತ ವಾಸ್ತುಶಿಲ್ಪಿ ಲಿ ಕಾರ್ಬೊಸಿಯರ್ ಅವರ ಯೋಜನೆ ಪ್ರಕಾರ ನಿರ್ಮಿಸಲಾಗಿದೆ.