ಹರ್ಷ ತರಲಿದೆ ಕಚ್ಚಾ ತೈಲ ಭವಿಷ್ಯ

ಕಳೆದ ಕೆಲವು ವರ್ಷಗಳಲ್ಲಿ ತೈಲ ದರದ ಗಣನೀಯ ಏರಿಕೆಯಿಂದ ಕಂಗಾಲಾಗಿದ್ದ ಜನ ಇತ್ತೀಚೆಗೆ ಆಗುತ್ತಿರುವ...
ಹರ್ಷ ತರಲಿದೆ ಕಚ್ಚಾ ತೈಲ ಭವಿಷ್ಯ

ನವದೆಹಲಿ: ಕಳೆದ ಕೆಲವು ವರ್ಷಗಳಲ್ಲಿ ತೈಲ ದರದ ಗಣನೀಯ ಏರಿಕೆಯಿಂದ ಕಂಗಾಲಾಗಿದ್ದ ಜನ ಇತ್ತೀಚೆಗೆ ಆಗುತ್ತಿರುವ ದರ ಇಳಿಕೆಯಿಂದಾಗಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರು ಬಿಡುತ್ತಿದ್ದಾರೆ. ಇನ್ನಷ್ಟು ಖುಷಿಯ ವಿಚಾರವೆಂದರೆ ಮುಂದಿನ ದಿನಗಳಲ್ಲಿ ತೈಲ ದರ ಮತ್ತಷ್ಟು ಇಳಿಕೆಯಾಗಲಿದೆ.

ಹೌದು. ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ದರ ಹಿಂದೆಂದೂ ಕಂಡರಿಯದಷ್ಟು ಇಳಿಕೆಯಾಗುತ್ತಿದ್ದು, ಪ್ರಸಕ್ತ ವರ್ಷ ಇದರ ದರವು ಬ್ಯಾರೆಲ್‍ಗೆ ಸರಾಸರಿ 58.30 ಡಾಲರ್ ಆಗಲಿದೆ ಎಂದು ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಅಚ್ಚರಿಯ ವಿಚಾರವೆಂದರೆ, ತೈಲ ದರವು ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವೇಳೆ ಆಗಿದ್ದಕ್ಕಿಂತ ಕಡಿಮೆಯಾಗಲಿದೆ. 33 ಮಂದಿ ಆರ್ಥಿಕ ತಜ್ಞರು ಮತ್ತು ವಿಶ್ಲೇಷಕರು ನಡೆಸಿದ ಸಮೀಕ್ಷೆಗಳು ಈ ವಿಚಾರ ವನ್ನು ಬಹಿರಂಗಪಡಿಸಿವೆ. ಇದೇ ವೇಳೆ, ಜೂನ್ ನಂತರ ಸ್ವಲ್ಪಮಟ್ಟಿಗೆ ತೈಲ ದರವು ಏರಿಕೆಯಾ ಗಬಹುದು ಎಂದೂ ಸಮೀಕ್ಷೆಗಳು ಹೇಳಿವೆ.

ಪೆಟ್ರೋಲಿಯಂ ರಫ್ತು ರಾಷ್ಟ್ರಗಳ ಸಂಸ್ಥೆಯು ತೈಲ ದರವು ಎಷ್ಟೇ ಇಳಿಕೆಯಾದರೂ ಉತ್ಪಾದನೆಯನ್ನು ಸ್ಥಗಿತಗೊಳಿಸುವುದಿಲ್ಲ ಎಂಬ ತೀಮರ್ಮಾನಕ್ಕೆ ಬಂದಿದೆ. ಇದುವೇ ಕಚ್ಚಾ ತೈಲ ದರ ಇಳಿಕೆಯಾಗಲು ಕಾರಣ. ಆದರೆ ತೈಲ ದರ ಅಗ್ಗವಾದಂತೆ ಅಮೆರಿಕಕ್ಕೆ ಶೇಲ್ ತೈಲದಿಂದ ಬರುವ ಲಾಭದ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡಲಿದೆ ಎಂಬ ಅಬಿಪ್ರಾಯವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

ಡೀಸೆಲ್‍ಗಿಂತಲೂ ಅಗ್ಗ!
ಡೀಸೆಲ್‍ಗಿಂತಲೂ ಕಡಿಮೆ ದರದಲ್ಲಿ ಈಗ ವೈಮÁನಿಕ ಇಂಧನ ಸಿಗುತ್ತದೆ ಎಂದರೆ ನೀವು ನಂಬುತ್ತೀರಾ?

ನಂಬಲೇಬೇಕು ಭಾನುವಾರ ವೈಮಾನಿಕ ಇಂಧನ (ಎಟಿಎಫ್) ದರವು ಶೇ.11.3ರಷ್ಟು ಇಳಿಕೆಯಾಗಿದ್ದು, ಡೀಸೆಲ್‍ಗಿಂತಲೂ ಅಗ್ಗದಲ್ಲಿ ದೊರೆಯುವಂತಾಗಿದೆ. ಕಳೆದ ತಿಂಗಳು ಎಟಿಎಫ್  ದರವು ಪೆಟ್ರೋಲ್‍ಗಿಂತಲೂ ಕಡಿಮೆಗೆ ಇಳಿದಿತ್ತು. ಈಗ ದೆಹಲಿಯಲ್ಲಿ ಎಟಿಎಫ್ ದರ ಕಿಲೋ ಲೀಟರ್ ರು. 5,909 ರಷ್ಟು ಇಳಿಕೆಯಾಗಿದ್ದು, ರು.46,513 ಆಗಿದೆ.

ಜ.1ರಂದು ಇದರ ದರ ಕಿ.ಲೀ.ಗೆ ರು. 7,520ನಷ್ಟು ಕಡಿತಗೊಂಡಿತ್ತು. ಅಂದರೆ ಕಳೆದ ತಿಂಗಳ ದರ ಕಡಿತವು ಎಟಿಎಫ್ ಬೆಲೆಯನ್ನು ಲೀಟರ್‍ಗೆ ರು. 54.42 ರಷ್ಟಾಗಿಸಿತ್ತು. ದೆಹಲಿಯಲ್ಲಿ ಆ ಸಮಯದಲ್ಲಿದ್ದ ಪೆಟ್ರೋಲ್ ದರ ಲೀ.ಗೆ ರು. 58.91. ಈಗ ಮತ್ತೆ ವೈಮಾನಿಕ ಇಂಧನ ದರ ಲೀ.ಗೆ ರು. 46.51 ಆಗಿದ್ದು, ಡೀಸೆಲ್ ಗಿಂತಲೂ ( ರು. 51.52) ಕಡಿಮೆಯಾದಂತಾಗಿದೆ. ವಿಮಾನದ ಒಟ್ಟು ಕಾರ್ಯನಿರ್ವಹಣಾ ವೆಚ್ಚದ ಶೇ.40ರಷ್ಟನ್ನು ಇಂಧನಕ್ಕಾಗಿಯೇ ಬಳಸಲಾಗುತ್ತದೆ. ಈಗ ದರ ಕಡಿತಗೊಂಡಿರುವುದು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅನೇಕ ವೈಮಾನಿಕ ಸಂಸ್ಥೆಗಳಿಗೆ ವರವಾಗಿ ಪರಿಣಮಿಸಿದೆ.

ಸಮೀಕ್ಷೆ ಏನು ಹೇಳುತ್ತೆ?

  • ಯುರೋಪ್ ಹೂಡಿಕೆ ಬ್ಯಾಂಕ್ ಬಾರ್‍ಕ್ಲೇಸ್ ಪ್ರಕಾರ ಭವಿಷ್ಯದ ತೈಲ ದರ ಬ್ಯಾರೆಲ್‍ಗೆ 44 ಡಾಲರ್.
  • ಗೋಲ್ಡ್‍ಮ್ಯಾನ್ ಸ್ಯಾಶ್ ಪ್ರಕಾರ ಭವಿಷ್ಯದ ತೈಲ ದರ ಬ್ಯಾರೆಲ್‍ಗೆ 50.40ಡಾಲರ್
  • ಅಮೆರಿಕದ ಕಚ್ಚಾ ತೈಲ ದರ- ಬ್ಯಾರೆಲ್‍ಗೆ ಸರಾಸರಿ 54.20 ಡಾಲರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com