
ಬಿಜೀಂಗ್: ಚೀನಾ ಪ್ರವಾಸದಲ್ಲಿರುವ ಭಾರತೀಯ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸೋಮವಾರ ಆದರದಿಂದ ಬರ ಮಾಡಿಕೊಂಡರು.
ನಾಲ್ಕು ದಿನಗಳ ಚೀನಾ ಪ್ರವಾಸದಲ್ಲಿರುವ ಸುಷ್ಮಾ ಅವರನ್ನು ಬಿಜೀಂಗ್ನ ಗ್ರೇಟ್ ಹಾಲ್ ಆಫ್ ದ ಪೀಪಲ್ ಕಟ್ಟಡದಲ್ಲಿ ಸ್ವಾಗತಿಸಿದ ಕ್ಸಿ, ತಮ್ಮ ಭಾರತ ಭೇಟಿಯನ್ನು ಸ್ಮರಿಸಿದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ತಮ್ಮ ನಡುವೆ ಏರ್ಪಟ್ಟಿರುವ ಒಪ್ಪಂದಗಳ ಅನುಷ್ಠಾನ ಹಾಗೂ ಪರಸ್ಪರ ಸಹಕಾರವನ್ನು ವೃದ್ಧಿಸುವ ನಿಟ್ಟಿನಲ್ಲಿ ಚೀನಾ–ಭಾರತ ದಿಟ್ಟ ಹೆಜ್ಜೆ ಇಟ್ಟಿವೆ. ‘ಈ ವರ್ಷ ದ್ವಿಪಕ್ಷೀಯ ಸಂಬಂಧಗಳಲ್ಲಿ ಉತ್ತಮ ಪ್ರಗತಿ ದಾಖಲಾಗಲಿದೆ ಎಂದು ನಾನು ನಂಬುತ್ತೇನೆ ಕ್ಸಿ ಜಿನ್‌ಪಿಂಗ್ ಹೇಳಿದರು.
ಕಳೆದ ಸೆಪ್ಟಂಬರ್‌ನಲ್ಲಿ ತಮ್ಮ ಭಾರತ ಭೇಟಿಯ ಬಳಿಕ ಉಭಯ ರಾಷ್ಟ್ರಗಳ ಸಂಬಂಧಗಳು ಹೊಸ ಆಯಾಮ ಪಡೆದುಕೊಂಡಿದೆ ಎಂದರು. ಅಲ್ಲದೆ ತಮ್ಮ ಭಾರತ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ನೀಡಿದ ಆತಿಥ್ಯವನ್ನು ಕ್ಸಿ ಜಿನ್ ಪಿಂಗ್ ಕೊಂಡಾಡಿದ್ದಾರೆ.
ಕ್ಸಿ ಅವರ ಆದರದ ಮಾತುಗಳಿಗೆ ತಲೆಭಾಗಿದ ಸುಷ್ಮಾ ಅವರು, ಮುಂದಿನ ತಿಂಗಳು ಆರಂಭಗೊಳ್ಳಲಿರುವ ಸೃಜನಶೀಲತೆ ಹಾಗೂ ನಾವೀನ್ಯ ವರ್ಷ ಎಂದು ಕರೆಯುವ ಚೀನಾದ ಲೂನಾರ್ ಇಯರ್ ಆಫ್ ಶೀಪ್‌ಗೆ ಪ್ರಧಾನಿ ಮೋದಿ ಅವರು ಶುಭ ಕೋರಿದ್ದಾರೆ ಎಂದರು.
ಅಂದಹಾಗೆ, ಚೀನಾ ಅಧ್ಯಕ್ಷರು ವಿದೇಶಾಂಗ ಸಚಿವರನ್ನು ಸ್ವಾಗತಿಸುವುದು ತುಂಬಾನೇ ವಿರಳ. ಭಾರತದ ಬಗೆಗಿನ ಸ್ನೇಹದ ಪ್ರತೀಕವಾಗಿ ಕ್ಸಿ ಅವರು ಸುಷ್ಮಾ ಅವರನ್ನು ಸ್ವಾಗತಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement