ರೈಲ್ವೇ ಟಿಕೆಟ್ ಬುಕ್ಕಿಂಗ್‌ನಲ್ಲಿ ಕ್ಯಾಷ್ ಆನ್ ಡೆಲಿವರಿ
ಚೆನ್ನೈ: 'ಪೇ ಕ್ಯಾಷ್ ಆನ್ ಡೆಲಿವರಿ' ಮೂಲಕ ರೈಲ್ವೇ ಟಿಕೆಟ್ ಬುಕ್ ಮಾಡುವ ವ್ಯವಸ್ಥೆಯನ್ನು ಜಾರಿಗೆ ತರಲು ಭಾರತೀಯ ರೈಲ್ವೆ ಇಲಾಖೆ ಮುಂದಾಗಿದೆ.
ಈ ವ್ಯವಸ್ಥೆ ಮೊದಲು ಗುರ್‌ಗಾಂವ್ ಪ್ರದೇಶದಲ್ಲಿ ಜಾರಿಗೆ ತರಲಾಗಿತ್ತು. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಹಾಗೂ ಇಂಟರ್‌ನೆಟ್ ಸೌಲಭ್ಯ ಇಲ್ಲದ ಗ್ರಾಮಾಂತರ ಪ್ರದೇಶದ ಜನರು ರೈಲ್ವೇ ಟಿಕೆಟ್ ಬುಕ್ಕಿಂಗ್ ಮಾಡಲು ಪರದಾಡುವಂತಾಗುತ್ತಿತ್ತು. ಪೇ ಕ್ಯಾಷ್ ಆನ್ ಡೆಲಿವರಿ ವ್ಯವಸ್ಥೆ ಗ್ರಾಮಾಂತರ ಜನರಿಗೆ ಸಹಾಯವಾಗಲಿದೆ. ಇನ್ನು ಮುಂದೆ ರೈಲ್ವೆ ಟಿಕೆಟ್ ಬುಕಿಂಗ್ ಮಾಡಿದ 2 ದಿನಗಳ ಒಳಗೆ ಮನೆಗೆ ತಲುಪಲಿದ್ದು, ಟಿಕೆಟ್ ತಲುಪಿದ ನಂತರ ಹಣ ನೀಡಬಹುದಾಗಿದೆ.
ಈ ಕುರಿತು ಅಧಿಕೃತ ಮಾಹಿತಿ ನೀಡಿರುವ ರೈಲ್ವೇ ಮುಖ್ಯ ಅಧಿಕಾರಿಗಳು, ಬುಕ್ ಮೈ ಟ್ರೈನ್. ಕಾಮ್(BookmyTrain.com) ಮೂಲಕ ಪ್ರಯಾಣಿಕರು ತಮ್ಮ ಟಿಕೆಟ್‌ಗಳನ್ನು ಬುಕ್‌ಮಾಡಬಹುದು. ಇತರೆ ಪ್ರದೇಶಕ್ಕೆ ಹೋಗುವುದಕ್ಕೂ 5 ದಿನಗಳ ಮುಂಚೆಯೇ ಟಿಕೆಟ್ ಬುಕ್ಕಿಂಗ್ ಮಾಡಬೇಕು. ಬುಕ್ಕಿಂಗ್ ಆದ ನಂತರ, ಹೊರಡುವ ಎರಡು ದಿನಕ್ಕೂ ಮೊದಲೇ ಟಿಕೆಟ್ ಮನೆಯ ಬಾಗಿಲಿಗೆ ಬರುತ್ತದೆ. ಟಿಕೆಟ್ ತಲುಪಿದ 120 ಗಂಟೆಗಳ ಒಳಗೆ ಪ್ರಯಾಣಿಕರು ಹಣವನ್ನು ಪಾವತಿಸಬೇಕು. ಒಂದು ವೇಳೆ ಹಣವನ್ನು ಪಾವತಿಸದಿದ್ದಲ್ಲಿ ಬುಕ್ಕಿಂಗ್ ಮಾಡಿದ ಟಿಕೆಟ್ ರದ್ದಾಗುತ್ತದೆ ಎಂದು ಹೇಳಿದ್ದಾರೆ.
ಟಿಕೆಟ್ ಬುಕ್ ಮಾಡಿ ನಂತರ ರದ್ದು ಪಡಿಸಿದರೆ, ಪಾವತಿ ಮಾಡಿರುವ ಹಣವನ್ನು ಪ್ರಯಾಣಿಕರ ಬ್ಯಾಂಕ್ ಖಾತೆ ಸಂಖ್ಯೆಗೆ ಹಾಕಲಾಗುತ್ತದೆ. ಒಂದು ವೇಳೆ ಪ್ರಯಾಣಿಕರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲದಿದ್ದರೆ ಹಣವನ್ನು ಚೆಕ್ ಮೂಲಕ ಮನೆಯ ವಿಳಾಸಕ್ಕೆ ಕಳುಹಿಸಲಾಗುತ್ತದೆ. ಆದರೆ ಕೊರಿಯರ್‌ಗೆ ತಗುಲುವ ಶುಲ್ಕವನ್ನು ಟಿಕೆಟ್ ರದ್ದು ಮಾಡಿದ ಪ್ರಯಾಣಿಕರು ಪಾವತಿಸಬೇಕಾಗುತ್ತದೆ. ಟಿಕೆಟ್ ಬುಕ್ ಮಾಡಲಿಚ್ಛಿಸುವ ಪ್ರಯಾಣಿಕರು ಸ್ಲೀಪರ್ ಕ್ಲಾಸ್‌ಗೆ ರು. 40 ಹಾಗೂ ಎಸಿ ದರ್ಜೆಯ ಟಿಕೆಟ್‌ಗೆ ರು. 60 ಗಳನ್ನು ಕ್ಯಾಷ್ ಆನ್ ಡೆಲಿವರಿ ಮೂಲಕ ಪಾವತಿಸಬೇಕಾಗುತ್ತದೆ. ಕ್ಯಾಷ್ ಆನ್ ಡೆಲಿವರಿ ವ್ಯವಸ್ಥೆ ಈಗಾಗಲೇ 200 ನಗರಗಳಲ್ಲಿ ಲಭ್ಯವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ