
ವಾಷಿಂಗ್ಟನ್: ಭಾರತದಲ್ಲಿ ಕಳೆದ ಕೆಲವು ವರ್ಷಗಳ ಹಿಂದಿನ ಧಾರ್ಮಿಕ ಅಸಹಿಷ್ಣುತೆಯನ್ನೇನಾದರೂ ನೋಡಿದ್ದರೆ ಸ್ವತಃ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರೇ ಆಘಾತಗೊಳ್ಳುತ್ತಿದ್ದರು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಭಿಪ್ರಾಯಪಟ್ಟಿದ್ದಾರೆ.
ಮಿಶೆಲ್ ಮತ್ತು ನಾನು ಸುಂದರ, ವಿಸ್ಮಯಕಾರಿ, ವೈವಿಧ್ಯವನ್ನೇ ಹೊದ್ದುಕೊಂಡಿರುವ ಭಾರತದಿಂದ ವಾಪಸಾಗಿದ್ದೇವೆ. ಆದರೆ, ಕಳೆದ ಕೆಲವು ವರ್ಷಗಳಲ್ಲಿ ಅಲ್ಲಿ ಎಲ್ಲ ಧರ್ಮೀಯರ ನಂಬಿಕೆಗಳ ಮೇಲೆ ಮತ್ತೊಬ್ಬರಿಂದ ದಾಳಿ ನಡೆದಿದೆ. ಇಂಥ ಕೃತ್ಯಗಳು ನಡೆದದ್ದು ಆಯಾ ಜನರ ನಂಬಿಕೆ ಮತ್ತು ಪರಂಪರೆಯ ಕಾರಣಕ್ಕಾಗಿ. ಇಂಥ ಕೃತ್ಯಗಳನ್ನು ನೋಡಿದ್ದರೆ ದೇಶವನ್ನು ಸ್ವತಂತ್ರಗೊಳಿಸಿದ ಗಾಂಧೀಜಿ ಅವರಿಗೇ ಆಘಾತವಾಗುತ್ತಿತ್ತೋ ಏನೋ ಎಂದಿದ್ದಾರೆ ಒಬಾಮ. ವಾಷಿಂಗ್ಟನ್‍ನಲ್ಲಿ ನಡೆದ ರಾಷ್ಟ್ರೀಯ ಪ್ರಾರ್ಥನಾ ಉಪಹಾರ ಕೂಟದಲ್ಲಿ ಒಬಾಮ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಯಾವುದೇ ಧರ್ಮವನ್ನು ಉಲ್ಲೇಖಿಸದೆ ಅವರು ಈ ಹೇಳಿಕೆ ನೀಡಿದ್ದಾರೆ.
ಗಣರಾಜ್ಯೋತ್ಸವ ಅತಿಥಿಯಾಗಿ ಆಗಮಿಸಿದ್ದ ವೇಳೆ ಜ.27ರಂದು ಭಾರತದಲ್ಲಿ ಮಾಡಿದ ಕೊನೆಯ ಭಾಷಣ ದಲ್ಲೂ ಒಬಾಮ ಅವರು ಧಾರ್ಮಿಕ ಅಸಹಿಷ್ಣುತೆಯ ವಿಚಾರ ಪ್ರಸ್ತಾಪಿಸಿದ್ದರು. ಧಾರ್ಮಿಕ ಸಹಿಷ್ಣುತೆ ಇದ್ದರೆ ಮಾತ್ರ ದೇಶ ಯಶಸ್ಸು ಕಾಣಲು ಸಾಧ್ಯ ಎಂದು ಒಬಾಮ ಈ ವೇಳೆ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದು ಸಾಕಷ್ಟು ಪರ- ವಿರೋಧ ಟೀಕೆಗಳಿಗೆ ಕಾರಣವಾಗಿತ್ತು.
Advertisement