
ಪ್ಯಾರಿಸ್/ನವದೆಹಲಿ: ಕಪ್ಪುಹಣದ ಮಾಹಿತಿಗೆ ಕಮಿಷನ್‍ನ ಕೊಡುಗೆ!
ಸ್ವಿಜರ್ಲೆಂಡ್‍ನ ಎಚ್‍ಎಸ್‍ಬಿಸಿ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಭಾರತೀಯರ ಪಟ್ಟಿ ಬಿಡುಗಡೆಯಾದ ಬೆನ್ನಲ್ಲೇ ಭಾರತ ಸರ್ಕಾರ ಕಪ್ಪುಹಣ ಮಾಹಿತಿದಾರ, ಎಚ್ಎಸ್‍ಬಿಸಿ ಮಾಜಿ ನೌಕರ ಹೆರ್ವೆ ಫಾಲ್ಸಿಯಾನಿ ಅವರೊಂದಿಗೆ ಒಪ್ಪಂದವೊಂದನ್ನು ಮಾಡಿಕೊಂಡಿದೆ. ಅದರಂತೆ, ಅವರ ಮಾಹಿತಿ ಫಲವಾಗಿ ಭಾರತಕ್ಕೆ ಮರಳಿ ಬರುವ ಕಪ್ಪುಹಣದಲ್ಲಿ ಶೇ. 5ರಷ್ಟು ಫಾಲ್ಸಿಯಾನಿಗೆ ನೀಡಲು ಸರ್ಕಾರ ನಿರ್ಧರಿಸಿದೆ.
ಈ ವಿಚಾರವನ್ನು ಸ್ವತಃ ಫಾಲ್ಸಿಯಾನಿ ಅವರೇ ಬಹಿರಂಗಪಡಿಸಿದ್ದಾರೆ. ಫಾಲ್ಸಿಯಾನಿ ಮಾಹಿತಿ ಪಡೆದಿದ್ದ 45 ರಾಷ್ಟ್ರಗಳ ಪತ್ರಕರ್ತರ ಸಂಘವು ಕಳೆದ ವಾರವಷ್ಟೇ ಎಚ್‍ಎಸ್‍ಬಿಸಿಯಲ್ಲಿರುವ ಖಾತೆದಾರರ ಪಟ್ಟಿಯನ್ನು ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿತ್ತು. ಈ ಹಿನ್ನೆಲೆಯಲ್ಲಿ ಕಪ್ಪುಹಣದ ವಾಪಸಾತಿಗೆ ಶ್ರಮಿಸುತ್ತಿರುವ ಕೇಂದ್ರ ಸರ್ಕಾರ ಈಗ ಫಾಲ್ಸಿಯಾನಿ ನೆರವು ಪಡೆಯಲು ನಿರ್ಧರಿಸಿದೆ. ಅವರ ಮೂಲಕ ಕಪ್ಪು ಮುಖಗಳನ್ನು ಬೆಳಕಿಗೆ ತರುವುದು ಸರ್ಕಾರದ ಉದ್ದೇಶ.
ಮುಂದೆ ಬಹಳಷ್ಟಿದೆ: ಇತ್ತೀಚೆಗೆ ಬಿಡುಗಡೆಯಾದ ಪಟ್ಟಿಯ ಬಗ್ಗೆ ಮಾತನಾಡಿರುವ ಫಾಲ್ಸಿಯಾನಿ, ಇದು ಕಥೆಯ ಆರಂಭವಷ್ಟೇ. ಇನ್ನೂ ಹೊರಬರಲಿಕ್ಕೆ ಸಾಕಷ್ಟಿದೆ ಎಂದಿದ್ದಾರೆ. 'ಭಾರತ ಸರ್ಕಾರ ನನ್ನಿಂದ ಹೆಚ್ಚಿನ ಮಾಹಿತಿಯನ್ನು ಕೋರಿದೆ. ನಾನು ನೀಡುವ ಮಾಹಿತಿಯು ಕೇವಲ ಎಚ್‍ಎಸ್‍ಬಿಸಿ ಬ್ಯಾಂಕ್‍ಗಷ್ಟೇ ಸೀಮಿತವಲ್ಲ' ಎಂದೂ ಅವರು ನುಡಿದಿದ್ದಾರೆ. ಪಟ್ಟಿಯಲ್ಲಿರುವ ಅನೇಕರು ತಾವು ಹಣವನ್ನೇ ಇಟ್ಟಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ. ಅನೇಕ ರಾಷ್ಟ್ರಗಳ ತನಿಖೆದಾರರಿಗೆ ಇದೇ ದೊಡ್ಡ ಸಮಸ್ಯೆಯಾಗಿದೆ. ಶ್ರೀಮಂತ ವ್ಯಕ್ತಿಗಳು ತಮ್ಮ ಸಂಪತ್ತನ್ನು ಬೇರೆ ಬೇರೆ ಖಾತೆಗಳಲ್ಲಿ ಇಟ್ಟಿರುತ್ತಾರೆ. ಹಾಗಾಗಿ ಪಟ್ಟಿಯಲ್ಲಿ ಉಲ್ಲೇಖಿಸಲಾದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚು ಹಣವನ್ನು ಅವರು ಹೊಂದಿರುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಭಾರತದ ಹಣವು ಒಳಗಿರುವುದಕ್ಕಿಂತ ಹೆಚ್ಚು ಹೊರಗೇ ಹೊಂದಿದೆ ಎಂದೂ ಹೇಳಿದ್ದಾರೆ ಫಾಲ್ಸಿಯಾನಿ.
ಹೊಸ ಗುಪ್ತಚರ ಸಂಸ್ಥೆ: ವಿದೇಶದಲ್ಲಿನ ಅಕ್ರಮ ಹಣದ ಬಗ್ಗೆ ನಡೆಯುತ್ತಿರುವ ತನಿಖೆಯ ವೇಗ ಹೆಚ್ಚಿಸುವ ಉದ್ದೇಶದಿಂದ ವಿಶೇಷ ತನಿಖಾ ತಂಡ(ಎಸ್‍ಐಟಿ)ವು ಮತ್ತೊಂದು ಆರ್ಥಿಕ ಗುಪ್ತಚರ ಸಂಸ್ಥೆಯನ್ನು ತನ್ನ ಕಾರ್ಯವ್ಯಾಪ್ತಿಗೆ ತಂದಿದೆ. ಅದುವೇ ಕೇಂದ್ರ ಆರ್ಥಿಕ ಗುಪ್ತಚರ ಬ್ಯೂರೋ(ಸಿಇಐಬಿ). ಇದು ಎಲ್ಲ ತನಿಖಾ ಮತ್ತು ಜಾರಿ ಸಂಸ್ಥೆಯ ನಡುವೆ ಸಮನ್ವಯ ಕಾಪಾಡುವ ಕೆಲಸ ಮಾಡಲಿದೆ. ಉನ್ನತಾಧಿಕಾರ ಸಮಿತಿಗೆ ಮುಖ್ಯ ಸಮನ್ವಯ ಸಂಸ್ಥೆಯನ್ನಾಗಿ ಜಾರಿ ನಿರ್ದೇಶನಾಲಯವನ್ನು ಹೆಸರಿಸಲು ಎಸ್‍ಐಟಿ ಮೊದಲು ನಿರ್ಧರಿಸಿತ್ತು. ಆದರೆ ಕೊನೇ ಕ್ಷಣದಲ್ಲಿ ಎಸ್‍ಐಟಿ ಸಿಇಐಬಿಗೆ ಪ್ರಮುಖ ಹೊಣೆಯನ್ನು ವಹಿಸಿದೆ.
Advertisement