
ನವದೆಹಲಿ: ದೇಶ ಹಲವು ನಿರೀಕ್ಷೆಗಳೊಂದಿಗೆ ಬಜೆಟ್ ಅಧಿವೇಶನವನ್ನು ಎದುರು ನೋಡುತ್ತಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಭಾನುವಾರ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಇಂದು ದೆಹಲಿಯಲ್ಲಿ ಸರ್ವಪಕ್ಷ ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರಧಾನಿ, ಅಧಿವೇಶನದಲ್ಲಿ ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡಿ, ಪಕ್ಷಬೇಧ ಮರೆತು ಎಲ್ಲರೂ ಸೇರಿ ಜನರ ಸಮಸ್ಯೆ ಪರಿಹಾರಕ್ಕೆ ಚಿಂತಿಸೋಣ ಎಂದು ಹೇಳಿದರು.
ಅಧಿವೇಶನದಲ್ಲಿ ಆದ್ಯತೆ ಮೇರೆಗೆ ಎಲ್ಲಾ ವಿಷಯಗಳ ಬಗ್ಗೆಯೂ ಮುಕ್ತ ಚರ್ಚೆಗೆ ಸರ್ಕಾರ ಸಿದ್ಧವಿದೆ ಎಂದು ಪ್ರತಿಪಕ್ಷಗಳಿಗೆ ಭರವಸೆ ನೀಡಿದ ಮೋದಿ, ಸುಗಮ ಕಾಲಪಕ್ಕೆ ಸಹಕರಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ನಾಳೆಯಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಗದ್ದಲಕ್ಕೆ ಸಾಕ್ಷಿಯಾಗುವ ನಿರೀಕ್ಷೆ ಇದೆ. ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಎಲ್ಲ ಪ್ರಯತ್ನ ನಡೆಸಲಿವೆ. ಹೀಗಾಗಿ ಪ್ರಧಾನಿ ಮೋದಿ ಅವರು ಇಂದು ಸರ್ವಪಕ್ಷ ಸಭೆ ಕರೆದು ಸುಗಮ ಕಲಾಪಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಆದರೂ ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿರುವ ಒಟ್ಟು ಆರು ಕಾನೂನುಗಳಿಗೆ ವಿಧೇಯಕ ರೂಪದಲ್ಲಿ ಸಂಸತ್ತಿನ ಒಪ್ಪಿಗೆ ಪಡೆಯುವುದು ಸರ್ಕಾರಕ್ಕೆ ಸವಾಲಿನ ಕೆಲಸವಾಗಲಿದೆ.
Advertisement