ಎಚ್‍ಎಸ್‍ಬಿಸಿ ಸಿಇಒ ಹಣವೂ 'ಕಪ್ಪು'

ಸ್ಟುವರ್ಟ್ ಗಲಿವರ್
ಸ್ಟುವರ್ಟ್ ಗಲಿವರ್

ಲಂಡನ್: ಶ್ರೀಮಂತರಿಗೆ ತೆರಿಗೆ ತಪ್ಪಿಸಿಕೊಳ್ಳಲು ಅವಕಾಶ ಮಾಡಿಕೊಟ್ಟ ಆರೋಪಕ್ಕೆ ಗುರಿಯಾಗಿರುವ ಎಚ್‍ಎಸ್‍ಬಿಸಿ ಬ್ಯಾಂಕ್‍ನ ಸಿಇಒ ಮೇಲೆಯೇ ಈಗ ತೆರಿಗೆಗಳ್ಳ ತನದ ಆರೋಪ ಬಂದಿದೆ. ಭಾರಿ ಮೊತ್ತದ ಹಣವನ್ನು ಅವರು ತಮ್ಮದೇ ಬ್ಯಾಂಕ್ನಲ್ಲಿ ಇಟ್ಟಿದ್ದಾರೆ ಎನ್ನುವ ರಹಸ್ಯ ಮಾಹಿತಿ ಈಗ ಬಹಿರಂಗಗೊಂಡಿದೆ.

ಸಿಇಒ ಸ್ಟುವರ್ಟ್ ಗಲಿವರ್, ಬ್ಯಾಂಕಿನ ಜಿನೇವಾ ಪ್ರಧಾನ ಕಚೇರಿಯಲ್ಲಿ 2007ರಲ್ಲೇ ರು. 43.32 ಕೋಟಿಯನ್ನು ವೋರ್‍ಸೆಸ್ಟರ್ ಈಕ್ವಿಟೀಸ್ ಇನ್‍ಕ್ ಹೆಸರಿನಲ್ಲಿ ಇಟ್ಟಿದ್ದಾರೆ. ಇದು ಪನಾಮದಲ್ಲಿ ನೋಂದಾಯಿತ ಬೇನಾಮಿ ಕಂಪನಿ. ಕಪ್ಪುಹಣದ ಮಾಹಿತಿ ಬಹಿರಂಗಪಡಿಸಲೆಂದೇ ಹುಟ್ಟಿಕೊಂಡಿರುವ `ಸ್ವಿಸ್‍ಲೀಕ್ಸ್' ಎಂಬ ತಂಡವೊಂದು ಈ ವಿಷಯ ತಿಳಿಸಿದೆ. ಬ್ಯಾಂಕ್ ತನ್ನ ವಾರ್ಷಿಕ ವರದಿ ಬಿಡುಗಡೆಗೊಳಿಸುವ ಕೆಲವೇ ಗಂಟೆಗಳ ಮೊದಲು ಇಂಥದ್ದೊಂದು ಆಘಾತಕಾರಿ ಮಾಹಿತಿ ಬಹಿರಂಗವಾಗಿರುವುದು ಬ್ಯಾಂಕ್ ಅನ್ನು ಮುಜುಗರಕ್ಕೀಡು ಮಾಡಿದೆ.

ವಿಶೇಷವೆಂದರೆ ಈ ಸಂಸ್ಥೆಯ ಮೂಲಕವೇ 2003ರವರೆಗೆ ಗಲಿವರ್ ಅವರ ಬೋನಸ್ ಅನ್ನು ಪಾವತಿಸಲಾಗುತ್ತಿತ್ತು. ಇದಲ್ಲದೆ, ವೋರ್ಸೆಸ್ಟರ್ ಫೌಂಡೇಷನ್ ಹೆಸರಿನಲ್ಲೂ ಗಲಿವರ್ ಮತ್ತೊಂದು ಖಾತೆ ಹೊಂದಿದ್ದರು. ಅದನ್ನು 2007ರಲ್ಲೇ ನಿಷ್ಕ್ರಿಯಗೊಳಿಸಲಾಗಿತ್ತು.

ಭಾರತದಿಂದಲೂ ನೋಟಿಸ್: ಈ ಮಧ್ಯೆ, ಭಾರತದ ತೆರಿಗೆ ಇಲಾಖೆ ಕೂಡ ಎಚ್‍ಎಸ್ ಬಿಸಿ ಬ್ಯಾಂಕಿಗೆ ಸಮನ್ಸ್ ಜಾರಿ ಮಾಡಿದೆ. ಈ ವಿಚಾರವನ್ನು ಎಚ್‍ಎಸ್‍ಬಿಸಿ ಬ್ಯಾಂಕ್ ಸ್ಪಷ್ಟಪಡಿಸಿದೆ. ಎಚ್‍ಎಸ್‍ಬಿಸಿಯ ಸ್ವಿಸ್ ಶಾಖೆಯಲ್ಲಿ 1,195 ಭಾರತೀಯರು ಕಪ್ಪುಹಣ ಇಟ್ಟಿದ್ದಾರೆ ಎಂಬ ಮಾಹಿತಿ ಸೋರಿಕೆಯಾಗಿತ್ತು. ಒಂದು ವೇಳೆ ಆರೋಪ ಸಾಬೀತಾದರೆ ಸಂಸ್ಥೆ ವಿರುದ್ಧ ಭಾರತವು ಭಾರಿ ಮೊತ್ತದ ದಂಡ ಹಾಕುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com