
ನವದೆಹಲಿ: ಪಿಡಿಪಿ ಮುಖ್ಯಸ್ಥ ಮುಫ್ತಿ ಮೊಹ್ಮದ ಸಯೀದ್ ಅವರು ಶುಕ್ರವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡುವ ಮೂಲಕ ಬಿಜೆಪಿ-ಪಿಡಿಪಿ ಮೈತ್ರಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಭಾನುವಾರ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಮುಫ್ತಿ ಇಂದು ರೇಸ್‌ಕೋರ್ಸ್ ನಿವಾಸದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಫ್ತಿ, ಪ್ರಮಾಣವಚನ ಸಮಾರಂಭಕ್ಕೆ ನಾನು ಪ್ರಧಾನಿ ಅವರನ್ನು ಆಹ್ವಾನಿಸಿದ್ದೇನೆ. ಅವರು ಸಹ ಬರುವುದಾಗಿ ಹೇಳಿದ್ದಾರೆ ಎಂದರು. ಅಲ್ಲದೆ ಭೇಟಿ ವೇಳೆ, ಹಲವು ವಿಷಯಗಳ ಕುರಿತು ಪ್ರಧಾನಿಯೊಂದಿಗೆ ಚರ್ಚಿಸಿದ್ದು, ಸಭೆ ಫಲಪ್ರದವಾಗಿತ್ತು ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದ ನೂತನ ಮುಖ್ಯಮಂತ್ರಿಯಾಗಿ ಮಾರ್ಚ್ 1ರಂದು ಮುಫ್ತಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಈ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಭಾಗಿಯಾಗಲಿದ್ದಾರೆ ಎನ್ನಲಾಗಿದೆ.
ಮಾ.1ರಂದು ಜಮ್ಮು ವಿಶ್ವವಿದ್ಯಾಲಯದ ಝೊರಾವರ್ ಸಭಾಂಗಣದಲ್ಲಿ ಪಿಡಿಪಿ ನಾಯಕ ಮುಫ್ತಿ ಮೊಹ್ಮದ್ ಸಯೀದ್ ಮುಖ್ಯಮಂತ್ರಿಯಾಗಿ ಹಾಗೂ ಬಿಜೆಪಿಯ ನಿರ್ಮಲ್ ಸಿಂಗ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಅಲ್ಲದೆ ಈ ವೇಳೆ ಎರಡೂ ಪಕ್ಷಗಳ ತಲಾ 6 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿ ಸುಮಾರು ಎರಡು ತಿಂಗಳ ಬಳಿಕ ಕಣಿವೆ ರಾಜ್ಯದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದೆ.
Advertisement